Wednesday, 12 May 2021

ಏಕಾಂಗಿಯೇ ಏನಿದೆ ನಿನ್ನಲಿ?

 ಏಕಾಂಗಿಯೇ ಏನಿದೆ ನಿನ್ನಲಿ?

ಯಾರೊಂದಿಗೆ ಸೋಲುವೆ ಮಾತಲಿ?
ನಿನ್ನಲ್ಲೇ ನೀ ಇಲ್ಲವಾದಂತಿಹೆ  
ಏನಾಗುವೆ ನಾಳೆ ಈ ಬಾಳಲಿ?
ನೀ ಸರಿದು ಸರಿದು ಹರಿದು ಬರಲು ಸಾಧನೆ ಅದುವೇ 
ಈ ಕ್ಷಣವ ಹಿಡಿದು ನಡೆಯೋ ಮುಂದೆ ನಿಶ್ಚಯ ಗೆಲುವೇ 

ನೀ ಹಾಡುವ ಹಾಡಿದು ಯಾವುದು?
ಯಾರಿಂದ ನೀ ಪಡೆದಿರೋ ಸಾಲಿದು?
ಆಕಾಶಕೆ ಚಾಚುತ ಕಣ್ಣನು 
ಬಾ ಎಂದರೆ ಸೋನೆಯು ಬಾರದು 
ನೀ ಗಳಿಸಿ ಉಳಿಸಿ ಕಳೆಯದಿರಲು ನಿನ್ನದೇ ಸಕಲ 
ಈ ನಿಜವ ಅರಿತ ಮನುಜನೆಂದೂ ಆಗನು ಮರುಳ 

ನೀ ಏರುವ ಎತ್ತರ ಎಂದಿಗೂ 
ಆ ನಾಳೆಯ ದಾರಿಯ ದೀಪವು 
ಹೋರಾಟವೇ ಇಲ್ಲದೆ ಹೋದರೆ 
ನೀ ಗೆದ್ದರೂ ಇಲ್ಲ ಸಂತೋಷವು 
ಈ ಬದುಕು ಎನುವ ಸಮರದಲ್ಲಿ ಪಡೆಯುವೆ ಪದಕ 
ನೀ ಹಠವ ಬಿಡದೆ ಪುಟಿದು ನಿಲ್ಲು ಗೆಲ್ಲುವ ತನಕ  

ಈಜಾಡಲು ಏತಕೆ‌ ಸುಳಿಯಲಿ
ಆ ಸೆಳೆತದ ಮಾಪನ ಅರೆಯದೆ?
ಬೇಡೆಂದರೂ ದಕ್ಕುವ ಪ್ರೇಮವು
ನೀ ತೋರುವ ಬಿಂಬವೇ ಆಗಿದೆ
ಬಾ ಮುಗಿದ ಕತೆಗೆ ಬದಲಿ ಕೊನೆಯ ಗೀಚುವ ಜೊತೆಗೆ
ಬಾ ಕದವ ತೆರೆವ ಬೆಳಕು ಬರಲಿ ನಮ್ಮಯ ಒಳಗೆ

ಹೇ ಮೂಢನೆ ಎಚ್ಚರ ತಪ್ಪುತ  
ನೀ ಇಟ್ಟಿರೋ ಹೆಜ್ಜೆಯೇ ತಪ್ಪಿದೆ 
ನೀ ಬಿಟ್ಟಿರೂ ಬಿಡದಿದೆ ನಿನ್ನನು 
ಈ ನೆರಳಿಗೂ ಆಸರೆ ಬೇಕಿದೆ 
ಹೂ ಬಿಡುವ ಸಮಯಕಾಗಿ ಕಾಯಬೇಕಿದೆ ಗೆಳೆಯ 
ನೀ ಕೇಳಿ ನೋಡು ಒಮ್ಮೆ ಇದನೇ ಮಿಡಿದಿದೆ ಹೃದಯ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...