Monday 1 March 2021

ಕಣ್ಣಲ್ಲಿ ಹನಿಯೊಂದು ಜಿನುಗಿ

ಕಣ್ಣಲ್ಲಿ ಹನಿಯೊಂದು ಜಿನುಗಿ 

ಕನ್ನಡಿಯ ಸಿಡಿವಂತಿದೆ 
ಮುನ್ನುಡಿಯ ಬರೆದಂತ ದಾರಿ
ಕವಲಾಗಿ ಒಡೆದಂತಿದೆ
ಕೈಗೆಟುಕದೆ ಉಳಿದ ಮುಗಿಲು
ಮಳೆಗರೆವುದ ಮರೆತಿದೆ
ಈ ಮೊದಲು ಸಿಗುತಿದ್ದ ಸಂಜೆ
ಈಚೆಗೆ ಮಂಕಾಗಿದೆ

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ಆರಂಭದ ಹೆಜ್ಜೆ ಗುರುತು 
ಕಳುವಾಗಿ ಹೋದಂತಿದೆ 
ಆನಂತರ ಸಿಕ್ಕ ಕುರುಹು 
ನನದಾಗದೆ ಉಳಿದಿದೆ 
ತೋರಣದಿ ನಕ್ಕ ಎಲೆಯಲ್ಲಿ 
ಚುಚ್ಚು ಗಾಯದ ನೋವಿದೆ 
ಬಾಂದಳದ ನಕ್ಷತ್ರವೆಲ್ಲ 
ಗೊಂದಲದ ಗೂಡಾಗಿದೆ 

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ಅಂಗಳದಿ ಅರಳಿದ ಹೂವು 
ಬೇನಾಮಿ ಅನಿಸುತ್ತಿದೆ 
ಹಿತ್ತಲಲಿ ಕಣ್ಬಿಟ್ಟ ಚಿಗುರು 
ನೆರಳಲ್ಲೂ ನರಳುತ್ತಿದೆ 
ಬೊಗಸೆಯಲಿ ಕಾಪಿಟ್ಟ ಬೆಳಕು 
ಉಸಿರಿಗೆ ಆರುತ್ತಿದೆ 
ಖುಷಿಯನ್ನು ಮಾರುವ ಸಂತೆ 
ಮಸಣಕ್ಕೆ ಮನಸೋತಿದೆ 

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ದಿಕ್ಕೆಟ್ಟ ದಿಕ್ಸೂಚಿ ಮುಳ್ಳು 
ಹೃದಯಕ್ಕೆ ಮುಳುವಾಗಿದೆ 
ಇಂತಿಷ್ಟು ಹಂಚೋಕೂ ಕೂಡ 
ನಗೆ ಮೂಡಿ ಬರದಾಗಿದೆ 
ಓಟಕ್ಕೆ ಮಿತಿಯಿಟ್ಟ ವೇಗ 
ಸೋಲನ್ನೇ ರುಚಿಸುತ್ತಿದೆ 
ಯಾತಕ್ಕೂ ಇರಲೆಂದು ನೋವು 
ನನ್ನಲ್ಲೇ ಉಳಿದಂತಿದೆ 

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

ಬಲವಾಗಿ ಹಿಡಿಟ್ಟ ಒಲವು 
ಬಲಹೀನವಾಗುತ್ತಿದೆ 
ಬಿಟ್ಟು ಕೊಟ್ಟ ಗಳಿಗೆಯಲ್ಲಿ 
ರೆಕ್ಕೆ ಬೀಸಿ ಹಾರಿದೆ 
ಕೈಗೂಡಿದವು ಎಲ್ಲ ಹಾಗೇ 
ಒಂದೊಂದೇ ಕೈಜಾರಿದೆ 
ಬೇಕೆಂದು ಹಠ ಮಾಡೋ ಮನಸು 
ಮೌನಕ್ಕೆ ಶರಣಾಗಿದೆ.. 

ಕಾರಣ ಕೊಡಬಲ್ಲೆಯೇನು?
ಎಲ್ಲವ ಸರಿಪಡಿಸು ನೀನು... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...