Thursday 22 December 2016

ನಾನು ತಂದೆಯಷ್ಟೇ ಆಗಬಲ್ಲೆ

ನಾನೊಬ್ಬ ಗಂಡಸು
ನನ್ನ ಮಗು ಅತ್ತಾಗ

ಅಪ್ಪನಾಗಿ ಓಲೈಸಬಲ್ಲೆ
ಹಸಿವ ನೀಗಿಸಲಾರೆ


ನನ್ನ ಮಗು ಕಕ್ಕ ಮಾಡಿದಾಗ
ಮೋರೆ ಕಿವುಚಿ

"
ಬಂಗಾರಿ.. ನೋಡಿಲ್ಲಿ
!!"
ಜಾರಿಕೊಂಡರೆ ಕೆಲಸ ಮುಗಿದಂತೆ


ರಾತ್ರಿ ನಿದ್ದೆ ಕೊಡದಿದ್ದಾಗ
ಮಂಪರಲ್ಲಿ "ಮುದ್ದು.. ಕಂದ.. ಚಿನ್ನಪ್ಪ
"
ತೂಕಡಿಕೆಯಲ್ಲೊಂದು ಹಾಡು
ಮತ್ತೆ ಬೆಳಕಿಗೇ ಎಚ್ಚರ


ವಿಟಾಮಿನ್ನು, ಡೈಜಶನ್ನು
ಲಸಿಕೆಯ ಅಳತೆ ಆಕೆಗೆ ಗೊತ್ತು
ಯಾವ ಹೊತ್ತಿಗೆ ಏನು ಎಂಬುದು
ಅಪ್ಪನಾದವ ನನಗೆಲ್ಲಿ ತಿಳಿದೀತು


ಹೆಗಲಿಗೆ ಸಾಕಾದಾಗ ಮಡಿಲು
ಮಡಿಲು ಜೋಮು ಹಿಡಿದರೆ ಮತ್ತೆ ಹೆಗಲು
ಹೇಗೆ ಒಂದು ಅರ್ಧ ತಾಸಿನ ಶ್ರಮವಿತ್ತವ
ಅಮ್ಮನ ಮಡಿಲಲ್ಲಿ ಸುಲಲಿತ
,
ಅಥವ ನನಗೆ ಹಾಗೆ ಭಾಸ...


ಬೆನ್ನೀರ ಮಜ್ಜನದ ತರುವಾಯ
ಧೂಪ ಹಿಡಿದು ತಾಜಾ ನಿದ್ದೆಗೈವಾಗ
ಅಪ್ಪನೆಂಬವನ ಪರಾಕ್ರಮ
"ಇವ ಥೇಟು ನನ್ನಂಗೇ"


ನಾನೊಬ್ಬ ಗಂಡಸು
ತಂದೆತನದ ಸೀಮೆ ದಾಟುವುದು ಕಷ್ಟ
ಆಕೆ ಹೆಂಗಸು
ಅದೆಷ್ಟು ಸರಾಗ
ಬೇಕೆಂದಾಗ ತಾಯ್ತನದ ಸವಿ
ಇಲ್ಲವೆ ತಂದೆಯಾಗಲೂ ತಯಾರ್
ಅದಕ್ಕೇ ಅವಳು ತಾಯಿ!!


ಒಮ್ಮೊಮ್ಮೆ ಭ್ರಮೆಯಲ್ಲಿ ಬದುಕುತ್ತೇನೆ..
ಅಸಲಿಗೆ ತಾಯಾಗೋದು ಭ್ರಮೆ
ನಾನು ತಂದೆಯಷ್ಟೇ ಆಗಬಲ್ಲೆ...

                                      - ರತ್ನಸುತ
 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...