ಹಿಂದೆಲ್ಲ ಇಯರ್ಫೋನಿನ ವೈಯರಿನ
ಸಿಕ್ಕು ಬಿಡಿಸುವಲ್ಲಿ ಅದೇನೋ ಖುಷಿ ಇರುತ್ತಿತ್ತು  
ಅಂಚುಗಳನ್ನು ಹಿಂದಕ್ಕೆ-ಮುಂದಕ್ಕೆ 
ಮೇಲೆ-ಕೆಳಗೆ ಮಾಡಿ 
ಅಷ್ಟೂ ಚಕ್ರವ್ಯೂಹಗಳ ಭೇದಿಸಿ 
ಗಂಟು ಬಿಡಿಸುವಲ್ಲಿಗೆ  
ಮತ್ತೆ ಹತ್ತಾರು ಕಗಂಟು 
ಒಂದು ಕಿವಿಯ ಕೊಕ್ಕಿ ಕೈ ಕೊಟ್ಟರೆ 
ಉಳಿದ ಮತ್ತೊಂದರಲ್ಲೇ ತಳ್ಳಿದ 
ಹುಮ್ಮಸ್ಸು ಎಂದೂ ಕುಗ್ಗಿರಲಿಲ್ಲ;
ಕೇಳುವ ಹಾಡಿಗಷ್ಟೇ ಒತ್ತು ವಿನಃ 
ದ್ವನಿಯ ಕ್ವಾಲಿಟಿ ಯಾವತ್ತೂ ಮುಖ್ಯವಾಗಿರಲಿಲ್ಲ 
ಹಾಳಾದ ಪ್ಲಗ್ಪಿನ್ ಕತ್ತು ಆಗಾಗ ಸೀಳಿ 
ಶಸ್ತ್ರ ಚಿಕಿತ್ಸೆ ಮಾಡಿಸಿದಂತೆ ಪ್ಲಾಸ್ಟರ್ ಮೆತ್ತಿಸಿ  
ಮೈಕ್ ರಂಧ್ರಗಳಲ್ಲಿ ಹೊಕ್ಕ ಧೂಳನ್ನು 
ಮೆಲ್ಲಗೆ ಊದಿ ಈಚೆ ತಗೆವುದೇ ಕೆಲಸ;
ಜೀವವೇ ಹೋಗಿಬಂದಂತಾಗುತ್ತಿತ್ತು 
ಅಪ್ಪಿ ತಪ್ಪಿ ಜೋರಾಗಿ ಜಗ್ಗಿದಾಗ
ಇನ್ನು ಗುಂಪಾಗಿ ಬಿದ್ದ ಗೋಜಲನ್ನು  
ಬೇರ್ಪಡಿಸುವ ಬದಲು ಬಿಡಬೇಕಿತ್ತು ಅದರ ಪಾಡಿಗೆ
ಬಿಸಾಡುವ ಮನಸ್ಸಿಲ್ಲದೆ ಕಪಾಟಿನಲ್ಲಿ;
ಬೇಕೇ ಬೇಕೆಂದಾಗ, ಬೇಕಾದುದ ಬಿಟ್ಟು 
ಮಿಕ್ಕೆಲ್ಲವನ್ನು ನಿರ್ದಾಕ್ಷಣ್ಯವಾಗಿ ಕತ್ತರಿಸಬೇಕಾಗಿತ್ತು 
ಕಾಲ ಕಳೆದಂತೆ ಅಸ್ತಿತ್ವ ಬದಲಾಗಿ 
ವೈಯರ್ ಇದ್ದದ್ದು ವೈಯರ್ಲೆಸ್ ಆಯ್ತು  
ಪ್ಲಗ್ಪಿನ್ ಈಗ ಬ್ಲೂ ಟೂತ್ ಆಯ್ತು   
ಕೆಪ್ಪರ ಸಾಧನದಂತೆ ಇಯರ್ಫೋನೀಗ 
ಇಯರ್ಪಾಡಾಗಿ ಮಾರ್ಪಾಡಾಯ್ತು 
ಕರುಳು ಬೇರಾದ ತಾಯ್ಮಗುವಿನಂತೆ 
ಅತ್ತ ಮೊಬೈಲಮ್ಮ, ಇತ್ತ ಮಗು ಪಾಡು(pod)
ಹಿಂದೆ ಅಮ್ಮಳ ಹೊಟ್ಟೆ ತುಂಬಿದರೆ ಸಾಕಿತ್ತು 
ಆದರೀಗ ಮಗುವಿಗೂ ಉಣಿಸಬೇಕು;
ಮಾಡಬಹುದಾದದ್ದಿಷ್ಟೇ 
ಬೇಕಾದಾಗ ನಂಟು ಬೆಸೆದು
ಬೇಡವಾದಾಗ ಇಲ್ಲದ ನಂಟನು ಮುರಿಯಬಹುದು 
ಕೇವಲ ಒಂದೇ ಒಂದು ಟಚ್ಚಿನಲ್ಲಿ!
No comments:
Post a Comment