ಆಳವಾಗಿ ಸೇರಿಹೋಗಲೇನು ನೀಲಿ ಕಣ್ಣಲಿ
ಬೀಡು ಬಿಟ್ಟು ನಲಿಯಲೇನು ನಿನ್ನ ನೀಳ ತೊಳಲಿ
ಸಾಲುಗಟ್ಟಿ ನಿಂತ ಹಾಗೆ ನಿನ್ನ ಮುಂದೆ ಅಹಂ ಇದೋ
ಸೋಲಿಸೋಕೂ ಮುನ್ನ ಸೋತು ಹೋದೆ ನಿನ್ನ ಎದುರಲಿ
ಎಷ್ಟು ದೂರ ಸಾಗಬೇಕು ನೆರಳ ಹಿಂಬಾಲಿಸಿ
ಆಗಲೇನು ನಾನೇ, ಅದರ ಜಾಗವನ್ನು ತುಂಬತಾ
ಇಷ್ಟ ಪಟ್ಟ ಹಾಗೆ ನೀನು ಸಿಕ್ಕಿದಾಗ ತಿರುವಲಿ
ಮನದ ಭಾರ ಹಗುರವಾಗಿ ನಿನ್ನ ತುಂಬೋ ಇಂಗಿತ
ಹಿಟ್ಟು ತಿಂದ ದೇಹದಲ್ಲೂ ಗಟ್ಟಿ ಇರದು ಗುಂಡಿಗೆ
ಪ್ರೀತಿ ವಿಷಯದಲ್ಲಿ ಅದುವೂ ಹೂವಿನಷ್ಟೇ ಕೋಮಲ
ಬಿಟ್ಟು ಬಾಳಲಾರೆ ಎಂಬುದಷ್ಟು ಸಣ್ಣ ವಿಷಯವೇ?
ನೀನು ಇರದ ಬಾಳು ಕೆಸರ ಅಪ್ಪಿಕೊಂಡ ಉತ್ಪಲ
ತಟ್ಟಿ ಹೋಗು ಎದೆಯನೊಮ್ಮೆ ಚಿಮ್ಮಿ ಬರಲಿ ಅಕ್ಷರ
ಗೋಳು ತೋಡಿಕೊಳ್ಳುವಂತೆ ಗೀಚಿಕೊಳುವೆ ಹಾಳೆಯ
ಚಿಟ್ಟೆ ಬಿಟ್ಟು ಹೋದ ಹೆಜ್ಜೆಯನ್ನು ಹಿಡಿಯುವಾಕೆ ನೀ
ನನ್ನ ದುಗುಡ-ತುಮುಲ ಮೂಲ ಹಾಡನೊಮ್ಮೆ ಕೆಳೆಯಾ?
ನೋಡು ಹಸಿದುಕೊಂಡ ಕಣ್ಣು ಕನಸಿಗೆ ಕರೆ ನೀಡಿದೆ
ಯಾವುದೇ ಮುಲಾಜು ಇರದೆ ಸ್ವಪ್ನ ದಾಳಿ ಆಗಿಸು
ಸಣ್ಣ ಕಿಡಿಯ ಹೊತ್ತು ಉಗುರಿನಲ್ಲಿ ಬೆನ್ನ ಗೀರಲು
ಕರಗಿದಂತೆ ನಾನು ಹಿಡಿಯಲೆಂದು ನೀನೇ ಧಾವಿಸು
No comments:
Post a Comment