ಕಣ್ಣನ್ನು ನೋಡುತ್ತಾ
ಲೋಕ ಮರೆಯಲು ಬಹುದು
ನಾಕವೆಂಬಂತೆ ಆವರಣವೆಲ್ಲ
ಇನ್ನೇನು ಕೆಲ ಕಾಲ
ಬದುಕು ಮುಗಿಯಲು ಬಂತು
ಉತ್ಸಾಹವೊಮ್ಮೆಗೆ ಉಮ್ಮಳಿಸಿತಲ್ಲ!
ಚಿತ್ರ ಪಟಗಳು ಕೂಡ
ಪಿಳಿ ಪಿಳಿ ಕಣ್ಬಿಟ್ಟು
ಜೀವ ಪಡೆದು ಮಿಡಿದ ಅದ್ಭುತ ದೃಶ್ಯ
ಹಲವು ಯುಗಗಳ ದಾಟಿ
ಮೌನ ಮುರಿದ ಹರಳು
ಚೂರಾಗಿ ಚೆದುರಿರಲು ಸುಶ್ರಾವ್ಯ ಕಾವ್ಯ
ನಲ್ಮೆಯ ನೂಪುರಕೆ
ಜೀವ ಬಂದಿದೆ ಕುಣಿಯೇ
ನಾದ ವಿನೋದವನು ನೀಡುವ ಹೊತ್ತು
ಹೂ ಬನದ ದುಂಬಿಗಳು
ನಿನ್ನ ಸುಗಂಧವೇ
ಉತ್ಕೃಷ್ಟವೆನ್ನುತ್ತ ಹಿಂಬಾಲಿಸಿತ್ತು
ಇಳಿಜಾರಿ ಬಂದಂತೆ
ಇಳೆಗೀಗ ಚಂದಿರ
ನಿನ್ನ ತೊಟ್ಟಿ ಮನೆಯ ಅಂಗಳಕೆ ಸೋತ
ನೀ ಬಿಟ್ಟು ಹೊರಟರೂ
ಈ ದಾರಿ ಉದ್ದಕ್ಕೂ
ಇನ್ನೂ ರಿಂಗಣಿಸುತಿದೆ ನಿನ್ನದೇ ಸ್ವಗತ
ಪ್ರೇಮ ಸಂತೆಯ ಮೀರಿ
ನಿಂತ ದಾನದ ರೂಪ
ಕೊಟ್ಟವರಿಗಷ್ಟೇ ಪಡೆವಷ್ಟೂ ಹಕ್ಕು
ಕೈಯ್ಯಲ್ಲಿ ಕೈಯ್ಯಿಟ್ಟು
ಎದೆ ಹಗುರವಾದರೆ
ಹೃದಕ್ಕೆ ಹೇಳು ಮತ್ತೇನು ಬೇಕು!..
No comments:
Post a Comment