Wednesday 16 February 2022

ಅವಳು ಹಗಲಿನ ಬೆಳಗು

ಅವಳು ಹಗಲಿನ ಬೆಳಗು

ಅವ ರಾತ್ರಿಯ ಕತ್ತಲು
ಅವಳಿಗೆ ಕತ್ತಲ ಭಯವಿಲ್ಲ, ಅಲ್ಲಿ ಅವ ಇರುತ್ತಾನೆ
ಅವನಿಗೆ ಬೆಳಕ ಕೊರತೆಯಿಲ್ಲ, ಆಕೆ ಭರಪೂರ ಕೊಡುತ್ತಾಳೆ

ಪಾಳಿ ಬದಲಿಸುವ ವೇಳೆ
ಕೆಲ ಕಾಲ ಮಾತಿಗಿಳಿಯುತ್ತಾರೆ
ಆಗಸ ಆಲಿಸುತ್ತ ನಾಚಿ
ಕೆಂಪು ಮುಡಿದು ಕಂಗೊಳಿಸುತ್ತದೆ

ಅವನು ಚಂದ್ರನ ಸುತ್ತ
ತಾರೆಗಳ ತೋರಣ ಕಟ್ಟಿ ಪ್ರಕಟಿಸಿದಾಗ
ಅವಳು ಇಬ್ಬನಿಯ ಹೊತ್ತ
ಪಕಳೆಗಳ ಪ್ರೇಮ ಕವಿತೆ ಹಾಡುತ್ತಾಳೆ

ಅವನು ಮಿಂಚು-ಗುಡುಗುಗಳ ರೂಪಿಸಿ
ಎದೆಯ ಕಂಪಿಸಿದಾಗ
ಅವಳು ಕೆನ್ನೆ ಸೆರೆಹಿಡಿದ
ಹಿಮದ ರುಚಿಯ ಪರಿಚಯಿಸುತ್ತಾಳೆ

ಮಳೆ‌ ಇಬ್ಬರಿಗೂ ಆಪ್ತ
ಆದರೆ‌ ಭಾವ ಬೇರೆ
ಇಳೆ ಇಬ್ಬರಲ್ಲೂ ಸುಪ್ತ
ಮಿಡಿತದ ದಾಟಿ ಬೇರೆ

ಅವನಲ್ಲಿ ಆಕೆ ಎಲ್ಲ ಗುಟ್ಟುಗಳ
ಬೆಚ್ಚನೆ ಬಚ್ಚಿಟ್ಟು ಕಾಪಾಡುತ್ತಾಳೆ
ಆಕೆಯಲ್ಲಿ ಅವ ಸೀಳಿದ ಕಿರಣದ
ಬಣ್ಣಗಳಿಗೂ ಮೇರಾಗಿ ಉಳಿಯುತ್ತಾನೆ

ಹಣತೆ ಮೌನ ವಹಿಸಿದಾಗ
ಅವಳು ಅವನೊಳಗೆ
ಕಿಡಿ ಸೋಕಿದ ಮರು ಕ್ಷಣ
ಅವ ಅವಳೊಳಗೆ

ಇಬ್ಬರೂ‌ ಒಂದೇ ಅಲ್ಲ
ಒಂದಾದರೆ ಮತ್ತೊಂದಕೆ ಮೃತ್ಯು
ಯುಗಗಳಿಂದ ತಿದ್ದಿ ತಂದ
ಕಟ್ಟು ಕತೆಗಳ ಕಡತಗಳನ್ನು
ಒಂದೇ ಏಟಿಗೆ 
ಸುಟ್ಟು ಹಾಕಿ ಬಿಡಬಹುದಿತ್ತು
ಆಥವ
ಅವರಿಗೆ ಅವ್ಯಾವುದರ ಪರಿವೇ ಇಲ್ಲ
ಸಿಕ್ಕಷ್ಟೂ ಹೊತ್ತು ಪ್ರೀತಿಸಿ
ಮಿಕ್ಕಂತೆ ಮತ್ತೂ ಪ್ರೀತಿಸಿ
ಇರುವಿಕೆಯ ಸಾಬೀತು ಪಡಿಸುತ್ತ
ಉಳಿದು ಬಿಟ್ಟಿದ್ದಾರೆ 
ತಾವಿರುವಂತೇ!...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...