Wednesday, 16 February 2022

ಮೊದಮೊದಲು ಸಿಕ್ಕಾಗ ಕಂಡೂ ಕಾಣದ ಹಾಗೆ

ಮೊದಮೊದಲು ಸಿಕ್ಕಾಗ ಕಂಡೂ ಕಾಣದ ಹಾಗೆ 

ಇಬ್ಬರೂ ನಟಿಸಿದ್ದೆವು, ಇನ್ನೂ ನೆನಪಲ್ಲಿದೆ
ನಗೆ ತರಿಸದ ಚಟಾಕಿ ಹಾರಿಸಿದಾಗಲೂ
ಒತ್ತಾಯಕೆ ನಕ್ಕಿದ್ದು ಇನ್ನೂ ನೆನಪಲ್ಲಿದೆ

ಯಾರ ಕಣ್ಣಿಗೂ ಬೀಳದೆ ಮೆಲ್ಲ ಕೈ ಬೆಸೆದು 
ಸಂತೆ ಬೀದಿಗಳಲ್ಲಿ ಓಡಾಡಿಕೊಂಡೆವು 
ಎಲ್ಲರೂ ಗಮನಿಸುವುದ ಮೊದಲೇ ಅರಿತವರಾಗಿ 
ಮತ್ತೂ ಮುಗಿಬಿದ್ದೆವು ಇನ್ನೂ ನೆನಪಲ್ಲಿದೆ

ಚಿಕ್ಕ ಪುಟ್ಟ ಕಾರಣಕ್ಕೆ ಬೆನ್ನಿಗೆ ಬೆನ್ನ ಕೊಟ್ಟು 
ವಿಮುಖವಾಗುವ ವೇಳೆ ಸಂಕಟ ದುಪ್ಪಟ್ಟು 
ಹಠವ ಬಿಟ್ಟು ಕೊಡದಿರುವುದ ಆಗಿನಿಂದಲೇ 
ರೂಡಿಸಿಕೊಂಡಿದ್ದೆವು ಇನ್ನೂ ನೆನಪಲ್ಲಿದೆ 

ಯಾವ ಸಂಜೆಯ ಕೊಂಡಾಡಿದೆವೋ  
ಅದೇ ಮುಳುವಾಯಿತೆಂದು ವಿರಹದಲ್ಲಿ 
ಕಣ್ಣೀರಿನ ಪತ್ರಗಳ ಬರೆಬರೆದು ಹರಿದೆವು  
ಬವಣೆಯಲಿ ಬೆಂದೆವು ಇನ್ನೂ ನೆನಪಲ್ಲಿದೆ 

ರಾತ್ರಿಗಳ ಕನಸಿಗೆ , ಹಗಲು ಹೊಸ ಬಯಕೆಗೆ 
ಮೀಸಲಿಟ್ಟೆವು ನಡುವೆ ತೆಳು ಗೀಟು ಬರೆದು 
ಕತ್ತಲಿಗೆ ನಾವೆಂದೂ ಅಂಜಿದವರೇ ಅಲ್ಲ 
ಬೆಳಕು ನಮ್ಮೊಳಗಿತ್ತು ಇನ್ನೂ ನೆನಪಲ್ಲಿದೆ 

ನಾ ಮರೆತೆ ಎಂದು ನೀ, ನೀ ಮರೆತೆ ಎಂದು ನಾ 
ಹಳೆ ನೆನಪುಗಳ ಮೆಲುಕು ಹಾಕುತಿದ್ದೆವು 
ನೆನಪ ನೆನಪಿಸುವಂಥ ಬಳಪ ರೇಖೆಗಳನ್ನು 
ನೆಪ ಮಾತ್ರಕೆ ಬಿಡಿಸಿದೆವು ಇನ್ನೂ ನೆನಪಲ್ಲಿದೆ  

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...