Wednesday, 16 February 2022

ಮಗ್ಗದ ಹಗ್ಗವ ಜಗ್ಗಿ

ಮಗ್ಗದ ಹಗ್ಗವ ಜಗ್ಗಿ

ನೂಲಿಗೆ ಕಲಿಸುತ ಮಗ್ಗಿ
ನೇಯುವ ಸೀರೆಯ ಮೇಲೆ ನಿನ್ನದೇ ಚಿತ್ರ
ಕಲ್ಲನು ಬಿತ್ತಿದ ಎದೆಯ
ಸೊಲ್ಲನು ಆಡದ ಹೃದಯ
ಮೆಲ್ಲಗೆ ಕರಗಿದೆ ಬರೆದು ಪ್ರೇಮದ ಪತ್ರ

ಮಳೆಯು ಸಂಕಟದಿಂದ
ಇಳಿದು ಇಳೆಯನು ಬಡಿದು
ಮಿಡಿದ ಕಂಬನಿಯನ್ನು ಬೇರಾಗಿಸುತ
ಮುಡಿದೆ ಕೆನ್ನೆಗೆ ಒತ್ತಿ
ಪಡೆದೆ ಬಂಧನ‌ ಮುಕ್ತಿ
ಕಾಡೋ ಕನಸುಗಳನ್ನು ದೂರಾಗಿಸುತ

ತಳಿರು ತೋರಣವಿಲ್ಲ
ಚಿಗುರೋ ಹೂವುಗಳಿಲ್ಲ
ಹಿತ್ತಲ ತುಂಬ ಗೆದ್ದಲು ಹಿಡಿದ ನೆನಪು
ಕೊರಳು ಹಿಗ್ಗುತ ಹೀಗೆ
ಮೌನ ತಾಳಿದೆ ಹೇಗೋ
ಸುಡುವ ಬೆಂಕಿಯ ಜ್ವಾಲೆಗೆ ನಿನ್ನದೇ ಛಾಪು

ತಡೆದು ನಿಲ್ಲಿಸಿದಂತೆ
ಯಾರೋ ದಾರಿಯ ನಡುವೆ
ಹೆಜ್ಜೆ ಇಡುವುದೇ ಭಾರ ಸಾಗಲು ದೂರ
ಬಿಟ್ಟು ಹೊರಟಿರುವಾಗ
ಬೇರು ಪಡೆಯುವುದೇಕೆ
ಮನಸು ಒಪ್ಪುತಲಿಲ್ಲ ಯಾವುದೇ ಊರ

ಸೀಳಿ ಹೊರಟರೆ ಹೇಗೆ 
ಬೇಲಿ ಅಲ್ಲವೇ ಅಲ್ಲ 
ಬಾಳು ಹರಿದಿದೆ ನೋಡು ರಭಸವ ಕಂಡು 
ನೀ ಇಷ್ಟದ ಸುಳ್ಳು 
ನಂಬಿ ಸೋತಿಹೆನಲ್ಲ  
ಮುಳ್ಳು ಕಟ್ಟಿದ ಹಾರಕೆ ಕತ್ತನು ನೀಡಿದೆನಿಂದು

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...