Saturday, 1 January 2022

ನಾನು ಡಬ್ಬದಲ್ಲಿ ಮುಚ್ಚಿಟ್ಟ ಹಸಿ ಹಿಟ್ಟು

ನಾನು ಡಬ್ಬದಲ್ಲಿ ಮುಚ್ಚಿಟ್ಟ ಹಸಿ ಹಿಟ್ಟು

ನೀನು ಬೆಲ್ಲದಲ್ಲಿ ಬಚ್ಚಿಟ್ಟ ಸಿಹಿ ಗುಟ್ಟು
ಪ್ರೀತಿ ಸೇತುವೆ ನಮ್ಮ ನಡುವೆ ಕಟ್ಟಿ ಕೊಟ್ಟು
ಬೆರೆತು ಹೋದೆವು ಬಾಳಲ್ಲಿ ಇಷ್ಟ ಪಟ್ಟು

ಚೂರು ಬಿಸಿ ತಟ್ಟಿದಾಗ ನೀ ತುಪ್ಪವಾದೆ   
ನಾ ಜಾರಲೆಂದೇ ಕಾದ ಬೆಂದ ರೊಟ್ಟಿಯಾದೆ 
ಬಿಟ್ಟು ಕೊಟ್ಟಲ್ಲೆಲ್ಲ ನೀ ನನ್ನ ತುಂಬಿಕೊಂಡೆ 
ಕಿತ್ತೂ ಬೇರೆ ಆಗಲಾರೆವಂತೆ ಇನ್ನು ಮುಂದೆ  

ನೀನು ಗಟ್ಟಿಗಿತ್ತಿ, ನನ್ನ ಕಾಡಿ ಕೊಲ್ಲುವಾಕೆ  
ಪಾಕವಾಗಿ ನೋಡು ಒಮ್ಮೆ ನನ್ನ ತಬ್ಬಲಿಕ್ಕೆ 
ನೀ ರೂಪಿಸೋ ಹಾಗೆ ನಾ ರೂಪಗೊಂಡೆ 
ನಾ ಬಿದ್ದರೆ ನಿನ್ನದಲ್ಲ, ದೋಷ ನಂದೇ

ಖಾರವಾಗುತಿದ್ದೆ ಹಿಡಿಯದೇ ನೀ ನನ್ನ ಕೈಯ್ಯ 
ಹೊತ್ತ ಮೂಟೆಯಂತೆ ಭಾರವಾಗಿ ಪುಟ್ಟ ಹೃದಯ 
ಹೂರಣಕ್ಕೆ ನಾ ಕಾವಲಾದೆ ಕಡುಬಿನಲ್ಲಿ 
ಹಬ್ಬವಾಗಿ ನೆಲೆಸುವ ಕಣ್ಮನಸಿನಲ್ಲಿ 

ಇರುವೆ ಸಾಲಿಗೆ ನಾ ಗೆರೆಯ ಎಳೆದು ಬರುವೆ 
ನೀ ಇರುವಲ್ಲಿ ಚಿಲ್ಲಿ ರಂಗೋಲಿ ಬರೆವೆ 
ಅಚ್ಚು ಕಟ್ಟು ನೀ ನಾಚಿದಾಗ ಮುದ್ದೆ ಬೆಲ್ಲ 
ನಾ ಪಡೆವ ಹೆಸರು ನಿನ್ನದು, ನನ್ನದಲ್ಲ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...