Saturday, 1 January 2022

ಚಿಕ್ಕಪೇಟೆಯ ಗಲ್ಲಿಗಳಲ್ಲಿ

ಚಿಕ್ಕಪೇಟೆಯ ಗಲ್ಲಿಗಳಲ್ಲಿ

ಎತ್ತ ನೋಡಿದರೂ ಬಣ್ಣಗಳು
ದುಬಾರಿ ಬೆಲೆಯ ಥಾನುಗಳೊಂದೆಡೆ 
ಅಗ್ಗದ ಬ್ಲೌಸ್ ಪೀಸುಗಳು

ಕೊಳ್ಳುವವರಲ್ಲಿ ಎರಡು ವಿಧ
ತೊಡಲು -
ಮುಟ್ಟಿ, ಸವರಿ, ಅಳೆದು
ಮ್ಯಾಂಚಿಂಗ್ ಮಾಡುವವರದು ಒಂದು ವಿಧ
ಕೊಡಲು - 
ಯಾವುದಾದರೆ ಏನು?
ಕಡಿಮೆ ಬೆಲೆಗೆ ಗಿಟ್ಟಲು ಅದುವೇ
ಸಾಕೆನ್ನುವವರದು ಇನ್ನೊಂದು ವಿಧ

ಪ್ಲಾಸ್ಟಿಕ್ ಚೀಲದ ಒಳಗೆ
ಉಸಿರುಗಟ್ಟಿದ ಬಣ್ಣದ ತುಂಡು
ನಾನಾ ಕೈ ಬದಲಾದರೂ ಈ ತನ
ಈಚೆ ತೆಗೆದವರಿಲ್ಲ ಯಾರೂ

ನೀರಲಿ ಅದ್ದಲು ಬಣ್ಣ ಬಿಡುವುದೇ?
ಒಗೆಯುವ ಹಂತಕೆ ಹೋದವರಾರು?
ಸತ್ಯವ ಅರಿತ ಅಂಗಡಿಯವ
ಇಳಿಸಿದ ಗುಣಮಟ್ಟವ ಇನ್ನೂ ಚೂರು..

ಅಟ್ಟದ ಮೇಲೆಲ್ಲೋ ಎತ್ತಿಟ್ಟು
ಅಪ್ಪಟ ಹಬ್ಬಕೆ ಬಿಚ್ಚಿದ ಕಟ್ಟು
ಅಗ್ಗದ ತುಂಡನು‌ ದಾನದಲಿಟ್ಟು
ಕೊಡುವರು ಉದಾರ ಮನಸನು ಹೊತ್ತು

ಕೊಂಡವರೇನೂ ಸಾಚಾಗಳಲ್ಲ
ಸತ್ಯವ ಅರಿಯದ ಮೂರ್ಖರು ಅಲ್ಲ
ಕೊಡುವವರಿಗೆ ಕೊಡಬೇಕೆಂಬುದಿಲ್ಲ
ಪಡೆದವಗೆ ಪಡೆಯದೆ ನಷ್ಟವಿಲ್ಲ

ಹೀಗಿದ್ದು ಮನೆ ಮನೆಗಳ ದಾಟಿ
ಅಲೆಯುವ ಪಾಪದ ಚೀಲಗಳು
ಯಾರೇ ಕೊಟ್ಟರೂ ಬೇಡ ಅನ್ನದೆ
ಚುಕ್ತಾ ಆಗುವ ಲೆಕ್ಕಗಳು

ಇಷ್ಟಿದ್ದರೂ ಕೊಡದವರೆಡೆ ಏಕೋ 
ನಿಷ್ಠುರ ಮಾಡುವ ಹೆಂಗಸರು
ಹಣದುಬ್ಬರದ ನಡುವೆ 
ನಾಟಕದಲ್ಲಿ ಭಾಗಿ ಗಂಡಸರು...

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...