Sunday, 17 August 2014

ಹಳೆ ಚಿಗುರು

ಮುಂಜಾವಿನ ಮಂಜಿನ ನಡುವೆ
ನಿನ್ನ ನೆನಪಲ್ಲಿ ಬೆವೆತಿದ್ದೇನೆ
ಒಲೆಯ ಕಾವಿನೆದುರು
ನೀ ನೆನಪಾಗದೆ ನಡುಗಿದ್ದೇನೆ

ಹೂವ ಕಂಪನು ನಿನಗೆ ಜೋಡಿಸಿ
ಪೂರ್ಣಗೊಳಿಸಿದ್ದೇನೆ
ನಿನ್ನ ಕಿರು ನಗೆಯ ನೆಪದಲ್ಲಿ
ಒಂದು ಲಕ್ಷ ಬಾರಿಯಾದರೂ 
ನಾ ನನ್ನ ಸೋಲಿಸಿದ್ದೇನೆ!!

ಊಟಕ್ಕೂ ಮೊದಲು ಕೈ ತೊಳೆದು
ಮೇಲೆದ್ದಿದ್ದೇನೆ
ನಿದ್ದೆಗಣ್ಣಲಿ ಇರದ ಲೋಕದಲಿ
ನಿನ್ನನ್ನೇ ಹೊದ್ದುಕೊಂಡಿದ್ದೇನೆ

ಹಾಳೆ ಹರಿದಿದ್ದೇನೆ, ಮಾತ ಮುರಿದಿದ್ದೇನೆ
ಅಸಹಜವಾಗಿ
ಹಾಡಿಕೊಂಡಿದ್ದೇನೆ, ಹೆಸರ ಕೂಗಿದ್ದೇನೆ
ಮೌನವಾಗಿ!!

ಕಾದು ಕರಗದ ಕಬ್ಬಿಣ ಹೃದಯದಲಿ
ಕಬ್ಬಿನ ರಸವ ಸವಿದಿದ್ದೇನೆ
ಇದ್ದೂ ಇರದ ನಿನ್ನ ನೆನಪ ಬೀದಿಯಲಿ
ಅಡಿಯಿಡದಂತೆಯೇ ಸವೆದಿದ್ದೇನೆ!!

ಎಲ್ಲ ಬಲ್ಲವನಂತೆ ಮೊದಲಾಗಿಸಿ
ಏನೂ ಹೊಳೆಯದ ಸಾಲಲ್ಲಿ ಕೊನೆಗೊಳಿಸಿದ್ದೇನೆ
ಆದಷ್ಟೂ ಯಾತನೆಗಳ ಮೀರಿ
ನಿನಗೊಂದಿಷ್ಟು ಉಳಿಸಿಬಿಟ್ಟಿದ್ದೇನೆ!!

-- ರತ್ನಸುತ

1 comment:

  1. ನಿನ್ನನ್ನೇ ಹೊದ್ದುಕೊಳ್ಳುವ ಕಲ್ಪನೆ ತುಂಬ ಇಷ್ಟವಾಯಿತು ಗೆಳೆಯ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...