Sunday, 17 August 2014

ನಾವು ನಮ್ಮವರು

ಊರುಗೋಲ ಸವೆದ ಹಿಡಿಯ
ನೂರು ಕೋಟಿ ರೇಖೆಗಳನು
ಎಣಿಸಲಾಗದವರು ನಿನ್ನ
ಆಡಿಕೊಂಡು ನಕ್ಕರು;
ನಿನ್ನ ಮೌಲ್ಯಗಳನು ಸುಟ್ಟ
ಭಸ್ಮವೆಂದು ಸಾರಿದವರು
ನಿನ್ನ ಮೌನದೊಳಗೆ ನೂರು
ಅಂಧ ಅರ್ಥ ಕಂಡರು!!

ಉಪ್ಪು ತಿಂದು ಕೊಬ್ಬಿದವರು
ಸೊಕ್ಕು ಮಾತನಾಡುವವರು
ಹಿಂದೆ ಹೊರಳಿ ಮುಗಿದ ಗತವ
ಮರೆತು ತೇಗುತಿರುವರು;
ಸ್ವಂತ ಚಿತ್ತವಿಲ್ಲದವರು
ಅಂತೆ-ಕಂತೆ ಓದಿಕೊಂಡು
ನೀನು ನಕ್ಕು ಹೋದಲೆಲ್ಲ
ಕ್ಯಾತೆ ತೆಗೆಯುತಿರುವರು!!

ಕಪ್ಪು ಚುಕ್ಕೆ ಅಂಟಿದಲ್ಲಿ
ಬೆಟ್ಟು ಮಾಡಿ ಕೂತ ಮಂದಿ
ಕೆನ್ನೆಗಂಟಿದಂಥ ಮಸಿಯ
ಮರೆಸುವಷ್ಟು ಮುಗ್ಧರು;
ಶಸ್ತ್ರ ಹಿಡಿದು ರೊಚ್ಚಿಗೆದ್ದ
ಕುದಿ ರಕ್ತ ಹರಿವಿನವರು
ಶಾಂತಿ ಮಂತ್ರದಲ್ಲಿ ಹುಳುಕು
ಹುಡುಕುವಂಥ ಮೂಢರು!!

"ನಾನು" ಎಂಬುದೊಂದೇ ತುಮ್ಮ
ಅಂತರಾತ್ಮದಲ್ಲಿ ನೆಟ್ಟು
ತ್ಯಾಗ ದೂರ ಬೆಟ್ಟ ಮಡಿಲ
ನೀರ ಪಯಣವೆಂದರು;
ತೊಟ್ಟು ರಕ್ತ ಹರಿಸದಂತೆ
ಹೆಜ್ಜೆ ಗುರುತು ಇರಿಸದಂತೆ
ಬೀದಿಗೊಂದು ನಾಮ ಫಲಕ
ತಮ್ಮ ಹೆಸರ ಕೊರೆದರು!!

ಮೂರು ಹೊತ್ತು ತಪ್ಪದಂತೆ
ಹೊಟ್ಟೆ ಪಾಡು ನೀಗಿಸುತ್ತ
ಹಸಿವ ಕುರಿತು ಕಂತು-ಕಂತು
ಭಾಷಣಗಳ ಬಿಗಿದರು;
ಮನೆಯ ಗೋಡೆ ಭದ್ರಗೊಳಿಸಿ
ಬಿರಿದ ಮನವ ಛಿದ್ರಗೊಳಿಸಿ
ಬುಡಕೆ ಬೆಂಕಿ ತಗುಲಿದಾಗ
ಲೋಕ ಚಿಂತೆ ಮರೆತರು!!

ಅಡಿಗೆ ಒಂದು ಹೆಸರು ಇಟ್ಟು
ಪಯಣಕೊಂದು ಕೊಂಕು ಕಟ್ಟಿ
ಡೊಂಕು ದಾರಿ ಮೀರಿ ತಾವೇ
ಟಂಕಸಾಲೆ ತೆರೆದರು;
ಗಂಟೆಗೊಂದು ನೇಮ ಮಾಡಿ
ತಾವೇ ಮುರಿವ ತ್ರಾಸಿಗೆರಗಿ
ನಿಷ್ಟರನ್ನು ಭ್ರಷ್ಟರೆಂದು
ಹಣೆ ಪಟ್ಟಿ ಬರೆದರು!!

--ರತ್ನಸುತ

1 comment:

  1. ಇಂದಿನ ಆಷ್ಟೂ ವೈರುದ್ಧ್ಯಗಳಿಗೆ ಅಸಲೀ ವಾರಸುದಾರರು ನಾವೇ ಎಂಬುದನ್ನು ಸಮರ್ಥವಾಗಿ ಬಿಂಬಿಸಿದ್ದೀರಿ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...