Thursday, 3 April 2025

ಎತ್ತಬಾರದಿತ್ತು ಕಯ್ಯ

ಎತ್ತಬಾರದಿತ್ತು ಕಯ್ಯ 

ಮುತ್ತು ಕೊಟ್ಟ ಕೆನ್ನೆಗೆ 
ನೆವವು ಅಷ್ಟೇ ಸಾಕಿತ್ತು 
ಜಾರಲು ಕಣ್ಣೀರಿಗೆ 
ಅತ್ತ ಮೇಲೆ ಎಷ್ಟು ಕಾಲ
ಬೇಕು ಮೊಗವು ಅರಳಲು?
ತಪ್ಪು ಸಾರಿಗಳನ್ನು ಕೂತು 
ಚರ್ಚಿಸೋಣ ಒಟ್ಟಿಗೆ 

ಬೀಳು ಬಿಟ್ಟ ಮರವು 
ನಾನು ಬಾಗುವುದ ಮರೆತೆನು 
ಹಬ್ಬಿಕೊಂಡ ನಿನ್ನ ಹೂವು 
ನನ್ನದೆಂದು ಬಿರಿದೆನು 
ಬೇರು ಇಬ್ಬರದ್ದೂ ಒಂದೇ 
ಎಂಬುದನ್ನೇ ಮರೆತೆವು 
ದೂರವಾಗೋ ಮಾತನಾಡಿ 
ಮಾಡಹೊರಟು ತಪ್ಪನು 

ಏರು ದನಿಯ ಎದುರು
ಮತ್ತೂ ಏರು ದನಿ ನಿನ್ನದು 
ಗದ್ದಲದ ನಡುವೆ ಪ್ರೀತಿ 
ಒಂದು ಕ್ಷಣವೂ ನಿಲ್ಲದು 
ಕಾಲಕೂನು ಕೊಡುವ ಚೂರು 
ಕಾಲಾವಕಾಶವ 
ಸಣ್ಣ ಮುನಿಸು ಒಮ್ಮೆಲೆಗೆ 
ಮನವ ಕದಡಬಾರದು 

ಬಿಟ್ಟ ಮಾತು ಹತ್ತು ದಿವಸ 
ಕಳೆಯಿತಲ್ಲ ಇಂದಿಗೆ 
ಚಿತ್ತ ಸ್ಥಿಮಿತದಲ್ಲಿ ಇರದೆ 
ಸರಿದೂಗುವುದೆಂದಿಗೆ 
ನಿಲುವುಗನ್ನಡಿಯಲಿ 
ಉತ್ತರಿಸಲಾಗದ ಪ್ರಶ್ನೆಗಳು 
ಹಬ್ಬಗಳೆಲ್ಲ ಉಳಿದವು 
ಅವವುಗಳ ಪಾಡಿಗೆ 

ಹೇಳು ಬೇರೆ ಯಾವ ಶಿಕ್ಷೆ
ಬೇಕು ಇನ್ನು ಜೀವಕೆ
ನೆರಳು ತೊರೆದ ದೇಹವಾದೆ
ಹೋಗಲು ನೀ ದೂರಕೆ
ಸಿಹಿಯ ಸಮಯವೊಂದೇ
ಇರಲಿ ಈಗಿನಿಂದಾಚೆಗೆ
ಕಹಿಯ ನೆನಪುಗಳೆಲ್ಲವೂ
ಸರಿಯಲಿ ನೇಪಥ್ಯ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...