ಎಷ್ಟೋ ಬಾರಿ
ಬಿದ್ದ ನನ್ನನ್ನು
ಕೈ ಹಿಡಿದು ನೀನೇ ಎತ್ತಬೇಕಿದೆ
ಮತ್ತೆ, ಮತ್ತೆ
ನಿನ್ನ ಮೋಹಕ್ಕೆ ಮರುಳಾಗಿ
ಸೋಲುಂಡ ಹಾಗೆ ನಾ ಬೀಳಬೇಕಿದೆ
ಹುದುಗಿದಾಸೆಗಳು
ಒಂದೊಂದಾಗಿ ಪುಟಿದು
ಆರಿಸಿ, ಪೋಣಿಸಿ ಕೊಡಬೇಕಿದೆ
ಹೇಳಲಾಗದ ಮಾತು
ಪತ್ರದಲ್ಲೇ ಉಳಿದು
ಮಡಿಸಿ ಜೇಬಲ್ಲಿರಿಸಿ ನಗಬೇಕಿದೆ
ಶಾಂತ ಕಣ್ಣಲ್ಲಿ ನನ್ನ
ಪ್ರೇಮ ಗದ್ದಲ ಬೆರೆಸಿ
ಹೊಮ್ಮುವ ಖುಷಿಗೆ ಕಣ್ಣೀರಾಗಬೇಕಿದೆ
ಏಕಾಂತದಲಿ ನೀನು
ನನ್ನ ಮುಂದಿರಿಸಿದ
ಸಾವಿರ ಒಗಟಿಗೆ ಕಂಗಾಲಾಗಬೇಕಿದೆ
ಯಾವ ಕೊಳಲಿಗೂ
ಯಾರ ಕೊರಳಿಗೂ
ಕಿವಿಗೊಡದೆ ನಿನ್ನನ್ನೇ ಕೇಳಬೇಕಿದೆ
ನಿನ್ನ ಅನುಮತಿಯಿರದೆ
ಬಣ್ಣಿಸಿದ ಪದ್ಯಗಳ
ಉಸಿರುಗಟ್ಟುವ ಹಾಗೆ ಹೇಳಬೇಕಿದೆ
ಎಂದೂ ಊಹಿಸದಂಥ
ಹೂ ಬಿರಿದ ರಾಗದಲಿ
ನೀನಾಡೋ ಪಿಸು ಮಾತ ಬೆರೆಸಬೇಕಿದೆ
ಕಂಪಿಸಿದ ಒಡಲಿಗೆ
ಬಿಸಿ ತಾಕುವಂತಹ
ಕನಸುಗಳ ಸಾಲಾಗಿ ಉರಿಸಬೇಕಿದೆ
"ಸಾಕು ನಿಲ್ಲಿಸು" ಎಂದು
ನೀ ಹೇಳಬೇಡ
ಹೆಜ್ಜೆಗಳು ದಾರಿಯ ಸವೆಸಬೇಕಿದೆ
ಚೂರೂ ಉಳಿಸದ ಹಾಗೆ
ಹೀರು ಮಧುವನು ಬೇಗ
ನನ್ನನ್ನು ನಿನ್ನಲ್ಲಿ ಬೆರೆಸಬೇಕಿದೆ!!
No comments:
Post a Comment