Tuesday, 29 April 2014

ಅನರ್ಥ ಕಂತೆ

ಕತ್ತಲು ಕರಗಿ ಲೀನವಾಯ್ತು
ಆ ದಿವ್ಯ ಜ್ಯೋತಿಯ ದರ್ಶನವಿಲ್ಲ
ಮತ್ತೂ ಎಳೆಸು ಕನಸು ಮೂಡಿತು
ಕಾಣುವ ಹೊರತು ಆಯ್ಕೆಗಳಿಲ್ಲ!!

ಎಲ್ಲೋ ಮಿನುಗುವ ಚುಕ್ಕಿಯ ಮಾತು
ಕೇಳುವ ಮನಸಿಗೂ ಬಡಿದ ಜಡತೆ
ಆದರೂ ಆನಿಸಿ ಆಲಿಸಿ ಕೂತು
ಬಳುಕಿ ಆರಿತು ಭ್ರಮೆಯ ಹಣತೆ!!

ಬೆಂಕಿ ಹಾಸಿಗೆಯೊಂದು ಪರೀಕ್ಷೆ
ಉತ್ತರ ಹುಡುಕಾಟದ ಹುರುಪಿಲ್ಲ
ಪಂಕ್ತಿ ಬೇದದ ಆಲೋಚನೆಗಳು
ಮನೆಯ ಬಿಟ್ಟು ದಾಟಿಸುತಿಲ್ಲ!!

ಚುಚ್ಚುವ ಅಂಚಿಗೂ ಮಿಡಿತವ ನೀಡಿ
ನೋವಿನ ಅನುಭವವವೇ ಬಲು ಸೊಗಸು
ಇಲ್ಲದೆ ಹೋದರೆ ಕಾರಿದ ನೆತ್ತರು
ಹಿಂದೆಯೇ ಬೀರುವುದು ಬಿರು ಮುನಿಸು!!

ಮುಚ್ಚಿದ ಕಣ್ಣಲಿ ಜ್ವಾಲೆಯ ಬೆರಗು
ತೆರೆದರೆ ನೀಳ ತಾಮಸ ಪರದೆ
ಮೂಡದ ಪದಗಳ ಕಾಲಿಗೆ ಬಿದ್ದು
ಹಾಗೋ, ಹೀಗೋ ಬೆವರುತ ಬರೆದೆ!!

ಬೆಳಕು ಕತ್ತಲ ಸಮರದ ಸರದಿ
ಬೆಳಕಿಗೆ ಗೆಲುವು ನಿಷ್ಚಯ ಅಲ್ಲಿ
ಬರೆದ ಹಾಳೆಯು ಹಾಸಿಗೆ ಅಡಿಗೆ
ಅರ್ಥವಾದರೆ ತಿಳಿಸುವೆ ತಾಳಿ!!

                               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...