Tuesday, 1 April 2014

ಹೊತ್ತಿರುವೆಯಾದ್ದರಿಂದ

ಉರಿದ ಮೇಣದ ಸುತ್ತ
ಅಂಗೈಯ್ಯ ರಕ್ಷೆ
ನೀ ಬರುವ ದಾರಿಗೆ
ಬೆಳಕಿನಾಸರೆಯಿಟ್ಟು
ಬೊಬ್ಬೆಗಳಿಗೂ ಬಿಸಿಯ
ತಟ್ಟಿಸಿದೆ ಬೇಕಂತ
ಹಬ್ಬವಲ್ಲ ಅಂಜಲಿಗೆ
ನಿನ್ನ ಬಿಟ್ಟು

ನೆರಳಿನಾಟಕೆ ಮಡಿಲಾದ
ಸುಣ್ಣದ ಗೋಡೆ
ಮೆಚ್ಚಿದ ಪಾತ್ರಕೆ
ಜೀವ ತುಂಬಿಸುತಿಲ್ಲ
ಬಂದವು ಬಂದಂತೆ
ಹೋದವು ಹೋದಂತೆ
ಕಾರ್ಯನಿಷ್ಠೆ ಅದು
ಬೇರೇನು ಅಲ್ಲ

ವಿಪರೀತ ನೋವುಗಳು
ಹಾಡಾಗಿ ಹೊಮ್ಮಿದವು
ಒಂಟಿ ದಾರಿ ಎಂದೂ
ಬೋರಾಗದಿರಲಿ
ಕೆಲವು ಹರ್ಕತ್ತುಗಳು
ಮನವ ಕದಡಿಸಬಹುದು
ಸ್ಥಿಮಿತವಿರಲಿ ಚೂರು
ಚೂರಾಗದಿರಲಿ

ಕೆಲವೊಗಟುಗಳಲ್ಲಲ್ಲಿ
ಕಟ್ಟಿ ಹಾಕುವ ಮುನ್ನ
ಮೂಲೆಗೆಸೆ ಅವುಗಳ
ಇದು ಸಮಯವಲ್ಲ
ಕಣ್ಣೀರೂ ಕೆಲವೊಮ್ಮೆ
ಚೇಷ್ಟೆಗೆಂದೇ ಹರಿಯೆ
ಪರಿಗಣನಿಸುವ ಪ್ರಯಾಸಕೆ
ಸುಂಕವಿಲ್ಲ !!

ದಾಪುಗಾಲಿಟ್ಟಲ್ಲಿ
ನಾ ಸಿಗುವೆ ಉಗುರಷ್ಟು
ಇಲ್ಲವೇ ಕರಗುವೆ
ಉಳಿದಷ್ಟೂ ಪೂರ
ನನ್ನ ಹೊತ್ತಿಸಿ ನಿನ್ನ
ದಾರಿ ಬೆಳಕಾಗಿಸಿದೆ
ಕೊನೆ ಕ್ಷಣಗಳುಳಿದವು
ನೆರಳಿನ ಪ್ರಕಾರ

               -- ರತ್ನಸುತ

1 comment:

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...