Friday, 11 April 2014

ಹ್ಮ್ಮ್... !!

ಜ್ವಲಿಸುವ ದೇಹದೊಳಲ್ಲಲ್ಲಿ
ಗುಪ್ತ ನಿಕುಂಜದೊಳ ಬೆಚ್ಚನೆಯ 
ಅನುಭೂತಿ ನೀಡಬಲ್ಲ
ಓ ಮಾಯಾ ಕನ್ನಿಕೆ,
ತಂಪಿನರಿವಾಗಿಸಲು 
ಉಸಿರಾಟ ತೊರೆಯದಿರು
ಹರಿದ ಬೆವರಲ್ಲಲ್ಲೇ ಇಂಗಿ ಹೋಗಲಿ;
ಹಣೆಯಿಂದ ಮುಂಗುಟಕೆ 
ಹರಿಸುವ ತೆವಲಿಗೆ ಬಲಿಯಾಗ ಬೇಡ!!

ಹೂಮಂಚಕೂ ಇದೆ
ಹೂಗಳಿಟ್ಟ ಶಾಪದಲ್ಲಿಯ ಪಾಲು;
ಒಮ್ಮೆ ನೀ ಹೊಸಕಿದೆ ಸಿಗ್ಗಿಗೆ,
ಮತ್ತೊಮ್ಮೆ ಹಿಗ್ಗಿಗ್ಗೆ;
ಮತ್ತು ನಾನು 
ನಿನ್ನ ಮೈ ಗಂಧದಲಿ
ಮೈ ಮರೆತು ಮುಲುಗುತ್ತ
ಪಕಳೆ ಕಿತ್ತೆಸೆದವುಗಳ ಲೆಕ್ಕವಿಲ್ಲ!!

ಬೆಳಕು-ಕತ್ತಲನು ಕೂಡಿಸಿದ ನಮಗೆ
ಹಗಲೆಲ್ಲಿ? ಇರುಳೆಲ್ಲಿ?
ಹಾಗೆಂದು ಹಾಸಿಗೆಯ ಹಸಿವು ನೀಗಿಲ್ಲ;
ನಮ್ಮಂತೆಯೇ ಅದೂ ಬಕಾಸುರ ಜಾತಿ,
ಸುರತದ ವಿಚಾರದಲ್ಲಿ.

ಇದೇ ಆಯಿತು;
ಮತ್ತೆ-ಮತ್ತೆ
ಕಳೆದುಕೊಂಡ ಸ್ಟಿಕ್ಕರ್ ಬಿಂದಿಯ
ಹುಡುಕುವುದರಲ್ಲಿ ಸಮಯ ವ್ಯರ್ಥ;
ಹೊಸತೊಂದು ಕಿತ್ತರೆ ನಷ್ಟವೇನು?
ಇಲ್ಲವೇ, ಹುಡುಕಾಟವೇ ನಿನಗಿಷ್ಟವೇನು?
ಇಗೋ ಬೆನ್ನಿನ್ನ ಬಯಲು,
ಸುರುಳಾಡು ಪೂರ, ಸಿಕ್ಕರೂ ಸಿಗಬಹುದು!!

ಉಗುರು ಪರಚಿದಲ್ಲಿ ಹಾಗೆ ನಿಂತು
ಕಂಬನಿ ಮಿಡಿಯುವ ಮುನ್ನ
ಕಾಲ್ಕಿತ್ತು ಬಿಡು ಪ್ರಿಯೆ;
ಗಾಯವಾರಲು ದಶಕಗಳುರುಳಲಿ
ಇಷ್ಟು ಬೇಗ ನೋವಿಗೆ ಸಾವೇ?
ಛೆ!! ಬದುಕಲಿ ಬಿಡು ಒಂದಷ್ಟು ದೂರ
ನೆನಪುಗಳ ಸವಿಯಲ್ಲಿ ಏಕಮುಖ ಸಲ್ಲ!!

ಮತ್ತೆ ತಣ್ಣಗಾಯಿತು ಒಡಲು?
ಬಾ ತೆಕ್ಕೆಯಲಿ ಸಿಲುಕಿ ನರಳಾಡುವ;
ಜಿಡ್ಡು ದೇಹಗಳೆರಡು ಬಡಿದಾಡಿಕೊಂಡರೆ
ಸತ್ತ ಹೂಗಳ ಆತ್ಮ ನಗಲು ಬಹುದು!!
ಹೊಚ್ಚ ಹೂಗಳು ಪಚ್ಚೆ ತೊರೆಯ ಬಹುದು!!

                                         -- ರತ್ನಸುತ

1 comment:

  1. ನಿಕುಂಜ, ಸುರುಳಾಡು, ಪಚ್ಚೆ ತೊರೆಯಬಹುದು ಒಳ್ಳೆಯ ಪ್ರಯೋಗಗಳು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...