Wednesday, 9 April 2014

ಕಳೆದ ಮನಸಿಗೆ

ಕನಸುಗಳ ಬೆನ್ಹತ್ತಿ ಎಲ್ಲಿ ಕಳೆದೆ ಮನವೇ?!!
ನಿನ್ನವನು ನಾನಿಲ್ಲಿ ಒಂಟಿ ಜೋಡು;
ತಕ್ಷಣಕೆ ಹೊಳೆಯದ ಮುನಿದ ಸಾಲುಗಳಿವೆ
ಬೇಗ ಅಂದರೆ ಹೇಗೆ ಬರೆವೆ ಹಾಡು?!!

ಬಿತ್ತ ಬೀಜಗಳೆಲ್ಲ ಬೆಚ್ಚಗುಳಿದವು ಮಣ್ಣ-
-ಲ್ಹೂತುಕೊಂಡವು ಚಿಗುರಿನ್ಹಂಗು ತೊರೆದು;
ಹರಿಸಿಕೊಂಡರೂ ಸಾಲುತಿಲ್ಲ ಕಣ್ಣಿನ ಹನಿಗ-
-ಳೆಲ್ಲ ಬತ್ತಿದವಲ್ಲಿ ಅತ್ತು ಕರೆದು!!

ಗಲ್ಲಿ-ಗಲ್ಲಿಗಳಲ್ಲಿ ಬಿಟ್ಟ ಗುರುತುಗಳನ್ನು
ಪತ್ತೆ ಹಚ್ಚುವ ಗೋಜಲಾಟದಲ್ಲಿ
ಗೆದ್ದರಿಲ್ಲದ ಗಮ್ಯ, ಸೋತರಿಲ್ಲದ ಶೂಲ
ನೋವ ಹುಣ್ಣನು ಇರಿದು ಕೆದಕುವಲ್ಲಿ!!

ಕೆಟ್ಟು ನಾರುವ ಬೆವರ ಎಷ್ಟು ಹರಿಸಲಿ ಹೇಳು?!!
ಚಟ್ಟ ಕಟ್ಟುವ ಕಲೆಗೆ ಪಳಗಲಿಲ್ಲ;
ಸತ್ತ ನೆನಪಿನ ತುಂಬು ಶೋಕದಾಚರಣೆಯನು
ಇದ್ದ ಚೂರು ಮಾಡಗೊಡುತಲಿಲ್ಲ!!

ಏನು ಕಾರಣ ಕೊಡಲಿ ಕಾದ ಎದೆ ಮೇಗಡೆ
ಸುಡುಗಾಡಿನಂತೊಂದು ಮೌನವಿಹುದು?!!;
ಹರಿದ ಉಸಿರಿಗೆ ಒಂದು ಮಧ್ಯಂತರ ನೀಡಿ
ಆನಂತರ ಸಲಹೆ ಕೇಳಬಹುದು!!

ಮತ್ತೂ ಮಾಗಲಿ ಗಾಯ, ಎಲ್ಲೆ ಮೀರಲಿ ಸಹನೆ
ಆಗಿಸಲಿ ನನ್ನೊಡಲಲೊಂದು ಗುರುತು;
ಎಲ್ಲ ಮುಗಿದರೆ ಮತ್ತೆ ಹೊಸತು ಹುಡುಕಾಡುವೆ
ಆಳ ಯೋಚಿಸುತಲಿ ಮನದ ಕುರಿತು!!

                                              -- ರತ್ನಸುತ

1 comment:

  1. ಗೆಳೆಯ, ಇಂತಹ ಪದ ಪ್ರಯೋಗದಿಂದಲೇ ನಮ್ಮನ್ನು ಸದಾ ನೀವು ಗೆದ್ದದ್ದು:

    ಬಿತ್ತ ಬೀಜಗಳೆಲ್ಲ ಬೆಚ್ಚಗುಳಿದವು ಮಣ್ಣ-
    -ಲ್ಹೂತುಕೊಂಡವು ಚಿಗುರಿನ್ಹಂಗು ತೊರೆದು;
    ಹರಿಸಿಕೊಂಡರೂ ಸಾಲುತಿಲ್ಲ ಕಣ್ಣಿನ ಹನಿಗ-
    -ಳೆಲ್ಲ ಬತ್ತಿದವಲ್ಲಿ ಅತ್ತು ಕರೆದು’

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...