Thursday, 24 April 2014

ಒಂದು ಮರದ ಕಥೆಯಲ್ಲ

ಮರದ ಬೇರಿಗೆ 
ಪಟ್ಟಣ ಕಾಣುವ ಹುರುಪು;
ಎಲ್ಲವೂ ಬುಡಮೇಲಾಗಿ
ಪಿಳಿ-ಪಿಳಿ ಕಣ್ಣರಳಿಸಿ 
ವೇಘಧೂತ ವಾಹನಗಳ
ಕಂಡು, ಆಲಿಸಿ
ಮೈ ಮರೆತವುಗಳಿಗೆ
ಒಣಗಿದೆಲೆಗಳ ಸದ್ದು
ಕೇಳದಷ್ಟು ಬಂಡತನ!!

ರೆಂಬೆಯ 
ಕೊನೆ ಮಿಡಿತವನ್ನೂ ಕಾದು
ಹಿಡಿದು
ಮಾಗಲು ಸಜ್ಜಾದ
ನೆಲಕುಸಿದ ಕಾಯಿ
ಕಾಯುವಿಕೆಯಲ್ಲೇ
ಕೊಳೆತು ಮಣ್ಣಾದದ್ದು
ಮರದ ಪಾಲಿಗೆ ತೀರ
ಸಾದಾರಣ ಸಂಗತಿ!!

ಹಕ್ಕಿ ಗುರುತನ್ನಿಟ್ಟು
ದಿನಗಳ ಲೆಕ್ಕ ಹಾಕಿ
ಹಣ್ಣಿನ ಗುಟುಕಿಗೆ
ಹಾರಿ ಬಂದು
ಹುಡುಕಿದರಿಲ್ಲದ ಮರ,
ಮತ್ತದರ ಬೇರು;
ಕಂಡದ್ದು ಬರೇ
ಕಾಂಡದ ಚಕ್ಕೆ ಚೂರು!!

ಸಾಲದಕ್ಕೆ ಜೇ.ಸಿ.ಬಿಗಳ
ತುರಿಕೆಯ ತೆವಲಿಗೆ
ಭೂಮಿಯ ಗರ್ಭಪಾತ
ಸಣ್ಣ ಬರವಸೆಗಳ ಭ್ರೂಣ ಹತ್ಯೆ;
ಜಲ್ಲಿ ಕಲ್ಲು, ಡಾಂಬರು ಸುರಿದು
ಹದವಾಗಿ ಉರುಳಿದ
ಬುಲ್ಡೋಜರುಗಳ
ಅಸಹನೀಯ ಸದ್ದು!!

ಅದೇ ಮರದ ತುಂಡೊಂದಕೆ
ಫಲಕ ರೂಪವಿತ್ತು
ಬಣ್ಣ ಬಣ್ಣದಕ್ಷರಗಳ
ಚಂದಗಾಣಿಸುತ್ತ ಗೀಚಿ
ನೆಟ್ಟರದೇ ಜಾಗದಲ್ಲಿ 
ಹೂ ಬಳ್ಳಿಯ ಪಕ್ಕ
"ಹಸಿರನ್ನು ಬೆಳೆಸಿ
ಪರಿಸರವ ಉಳಿಸಿ"!!

           --ರತ್ನಸುತ

1 comment:

  1. ಮನುಜ ಮತ್ತು ಮರದ ಅಸಡ್ಡೆ ಎರಡನ್ನೂ ಸಮೀಕರಿಸಿದ್ದೀರ.
    ಮರದ ನೆಪವಿಟ್ಟು ನಮ್ಮ ಮರೆವನ್ನೂ ಝಾಡಿಸಿದ್ದೀರ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...