Sunday, 20 April 2014

ಮೂಖನ ಪಾಡು

ಏನೆಂದು ಬಣ್ಣಿಸಲಿ
ನಿನ್ನನ್ನು ಕಂಡಾಗ
ಯಾವ ಪದ ಮುಂದಾಗುತಿಲ್ಲ;
ಯಾಕೆಂದು ಯೋಚಿಸಲಿ
ಬೇಕಂತಲೇ ಬಿದ್ದೆ
ಅಲ್ಲಾವ ಸಂಶಯಗಳಿಲ್ಲ!!

ಕಣ್ಣಲ್ಲಿ ಹರಿಸಿ ಬಿಡು
ನೂರಾಸೆ ಒಮ್ಮೆಲೆಗೆ
ನೆರೆಯಾಗಿ ನಾ ಉಳಿಯಬೇಕು;
ನಾ ಎಲ್ಲೆ ಮೀರುವೆನು
ಒಮ್ಮೊಮ್ಮೆ ಅದರಿಂದ
ಗೆರೆಯೊಂದ ನೀ ಎಳೆಯಬೇಕು!!

ಮಾತಲ್ಲಿ ಮಹಲುಗಳ
ಎಷ್ಟು ಕಟ್ಟಲು ಸಾಧ್ಯ
ನೀನೊಮ್ಮೆ ಕೈ ಚಾಚಿ ನೋಡು;
ದೂರದಿಂದೆಲ್ಲವೂ
ಚಂದಗಾಣಿಸುತಾವೆ
ಹತ್ತಿರದಿ ತೀರದ ಪಾಡು!!

ಗದ್ದಲದ ನಡುವೆಯೂ
ಹಾಡು ಗುನುಗುವ ಚಾಳಿ 
ಏಕಿಂಥ ಸಹವಾಸ ನನಗೆ?;
ಮಾತನಾಡುವ ಸಲುವೆ
ಏಕಾಂತ ಅರಸಿದೆ
ಸಿಕ್ಕಿದ್ದು ವನವಾಸ ಕೊನೆಗೆ!!

ಕಲ್ಲಾಗಿ ಉಳಿಯಲು
ಉಳಿ ಪಟ್ಟಿನ ಚಿಂತೆ
ಕೆತ್ತುವುದು ನೀನಾದರೇಳು;
ನೋವೆಲ್ಲ ಸಹಿಸುವೆ
ನೀ ಬಳಿಯಲಿರಲು
ಈನಡುವೆ ಹೀಗೊಂದು ಗೀಳು!!

ನೀ ಬೆಟ್ಟು ಮಾಡಲು
ನಾ ಬಾಗಿ ನಡೆಯುವೆ
ನೀ ಬಿಟ್ಟ ಬಾಣವೇ ನಾನು;
ನೀ ಬೊಟ್ಟು ಇಟ್ಟರೆ
ಅದು ಸೊಟ್ಟಗಾದರೆ
ನಾ ಬೆನ್ನ ತಟ್ಟಿಕೊಂಡೇನು!!

ಹೂ ಬಿಟ್ಟ ಹಿತ್ತಲು
ಬಾ ಎಂದು ಬಾಗಿಲು
ನಡುಮನೆಯ ನಡುವೊಂದು ಚಿತ್ರ;
ಒಳಕೋಣೆ ಗೂಟದಿ
ಜೋತು ಬಿದ್ದ ಶರ್ಟು
ಜೇಬಿನಲಿ ಬಚ್ಚಿಟ್ಟ ಪತ್ರ!!

                  --ರತ್ನಸುತ

1 comment:

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...