Tuesday, 1 April 2014

ಬಲಹೀನನಾಗುತ್ತ

ಒಂದು ಸಣ್ಣ ಕಂಪನಕ್ಕೆ
ಹೃದಯ ಬರೆದ ನೂರು ಪದ
ತೆರೆದುಕೊಂಡ ನೋವ ಕದ
ನಿಟ್ಟುಸಿರ ಗಾಳಿಗೆ;
ಹರಿದುಬಿಟ್ಟ ಹಾಳೆಯಲ್ಲಿ
ಮುಗಿದ ಶಾಯಿ ಗೀಟನಿಟ್ಟು
ಅಡಿಗೆ ಒಂದು ಮುತ್ತನಿಟ್ಟೆ
ಸತ್ತವುಗಳ ಪಾಲಿಗೆ!!

ಅಂಗಾಲಿನ ಮುಳ್ಳ ತೆಗೆದು 
ಕಣ್ರೆಪ್ಪೆಯ ಮೇಲಾನಿಸಿ
ಕಂಬನಿಗಳ ಕಾವಲಿರಿಸಿ
ಕಣ್ತುಂಬಿ ಬಂದಿದೆ;
ಚುಚ್ಚಿಕೊಂಡ ಜಾಗದಲ್ಲಿ
ನಾಲಗೆ ತುದಿ ಎಂಜಲಿಟ್ಟು
ಅಂಗಿಯ ಕೊನೆ ತುಂಡ ಕಟ್ಟಿ
ರಕ್ತ ಸ್ರಾವ ನಿಂತಿದೆ!!

ಬೆರಳಿನಂಚಿನಲ್ಲಿ ಉಳಿದ
ಕಚ್ಚಿಕೊಂಡ ಉಗುರಿನಂಚು
ಬೆಚ್ಚಿ ಬಿದ್ದ ಮಸಿಯ ಕಡ್ಡಿ
ಹಿಡಿಗೆ ಸಿಗದೆ ಜಾರಲು;
ಎಲ್ಲೋ ಎಂದೋ ಆಲಿಸಿಟ್ಟ
ವಿರಹ ಕಾವ್ಯದೊಂದು ಸಾಲ
ಕದ್ದು ತಿರುಚಿ ಬರೆಯಬೇಕೆ?
ಮನದ ತುಂಬ ಗೋಜಲು!!

ನುಚ್ಚುಗಣ್ಣಿನೊಳಗಿನಿಂದ
ಬೆಚ್ಚಗೊಂದು ನೋಟ ಬೀರಿ
ಮತ್ತೆ ಮುಚ್ಚಿಕೊಳ್ಳ ಬೇಕು
ಧೂಳು ನುಸುಳಲಾರದೆ;
ಕಂಡದಷ್ಟೇ ಬಿಂಬಿಸುತ್ತ
ಮತ್ತೆ ಮತ್ತೆ ಕಾಣಬೇಕು
ಅವಳ ಮೊಗದ ಲಕ್ಷಣಕ್ಕೆ
ಕುಂದು ಕೊರತೆ ಬಾರದೆ!!

ರತ್ನ ಮಾಲೆ ಕೊರಳಿನಲ್ಲಿ
ಹಿಚುಕಿಕೊಂಡ ಮಾತುಗಳಿಗೆ
ಹೊರಗೆ ಮಿನುಗುವಾವುಗಳನು
ಶಪಿಸಲಿಕ್ಕೂ ಬೇಸರ;
ಉಬ್ಬಿದೆದೆಯ ಒಳಗೆ ಉಳಿದು
ಕಾವು ಪಡೆದ ಕೊನೆಯ ಉಸಿರ
ಬಿಟ್ಟುಗೊಡುವ ಶ್ವಾಸಕೋಶ
ಥೇಟು ಕೆಸರ ಚಂದಿರ!!

                       -- ರತ್ನಸುತ

1 comment:

  1. ಕವಿ ತಾನು ಕಳೆದುಕೊಂಡ ಯಾವುದೋ ಹೃದಯವನ್ನು ಇಲ್ಲಿ ವಸ್ತುವಾಗಿಸಿಕೊಂಡಂತಿದೆ.
    ಈ ನೋವು ಬೇಗನೇ ಮಾಯಲಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...