Saturday, 5 April 2014

ಹಾಳಾದ ಬೇಸಿಗೆ

ಬಿಸಿಲು ಸಾಕಷ್ಟಿದೆ ಹೊರಗೆ
ಮೈ ಬೆವರನ್ನು ಹಿಂಡಲಿಕ್ಕೆ;
ಬಿಡುವಿಲ್ಲದೆ ಒಂದೇ ಸಮನೆ 
ತಿರುಗುವ ಫ್ಯಾನಿಗೆ ಹೊಟ್ಟೆ ಉರಿ
ತನ್ನುಸಿರಿನಾಟಕ್ಕೆ ಕರ್ಟನ್ನುಗಳು
ಎಡಬಿಡದೆ ಬಳುಕುತ್ತ 
ಅತ್ತ ಕಿಟಕಿಯ ಬಿಸಿಯನ್ನೂ
ಇತ್ತ ಗಾಳಿಯ ಸವಿಯನ್ನೂ ಸವಿದು
ಸುಖಿಸುತ್ತಿರುವುದ ಕಂಡು!!

ದಾರಿ ಹೋಕರೆಲ್ಲ ಹಿಡಿದಿದ್ದಾರೆ
ಕಪ್ಪು ಛತ್ರಿಗಳ ತಲೆಯ ಮೇಲೆ,
ಮಂಜುಗಣ್ಣಿಗೆ ಕಾಣುತ್ತಿತ್ತು;
ಬೆಚ್ಚೆದೆಯ ಸುಂದರಿಯರು
ತಮ್ಮ ಮುಖ ಮರೆಸಿ ಓಡಾಡುವುದು
ಎಷ್ಟು ಸರಿ?
ನೆರವಿಗೆ ಮಧ್ಯಂತರ ಮೋಡವಾದರೂ
ಬರಬೇಕಿತ್ತು ನೆರಳಾಗಿ!!

ತಲೆದಿಂಬು ಒದ್ದೆಯಾಗಿದ್ದು
ಕನಸುಗಳು ಕಾವೇರಿ,
ಇನ್ನು ಎಲ್ಲೆಲ್ಲೋ ಒದ್ದೆ-ಒದ್ದೆ
ಒಂದೊಳ್ಳೆ ತಣ್ಣೀರ ಸ್ನನವ ಬಯಸಿ;
ತುರಿಕೆ ತರಿಸಿದ ಬೆನ್ನು ಎಟುಕುತ್ತಿಲ್ಲ
ಹಾಳಾದ ಕೈಗಳಿಗೆ,
ಹಿಂದಿನ ದಿನವಷ್ಟೇ 
ಉಗುರು ಕತ್ತರಿಸಿದ್ದು ಬೇರೆ!!

ಐಸ್ ಕ್ಯಾಂಡಿ ಮಾರುತ್ತಿದ್ದವನಂತೂ
ಪೂರ್ತಿ ನೆಂದೇ ಹೋಗಿದ್ದ!!
ಆಗಾಗ ಒಂದು ಚೀಪಿಕೊಂಡರೆ
ಅವನಿಗೇನು ದರ್ದು?
ಆ ಅಜ್ಜನ ಕಾಲದ ಐಸ್ ಪೆಟ್ಟಿಗೆ ಮೇಲೆ
ಬಣ್ಣ ಮಾಸಿದ ಚಿತ್ರಗಳು,
ಅದು ಅವನ ಪೂರ್ವಿಕರ ಪಾಡು
ಅವನದ್ದೂ ಸಹಿತ !!

ನೀಲಾಕಾಶದಿ ಬಿಡಿಸದ ರಂಗೋಲಿಯ
ಅಲ್ಲಲ್ಲಿ ಇಟ್ಟ ಚುಕ್ಕಿಗಳ ಹಿಂಡು,
ಸುಡುವ ಸೂರ್ಯನಿಂದೊಂದಿಷ್ಟು ದೂರ
ತಪ್ಪಿಸಿಕೊಂಡು;
ಕಾಣುತ್ತಲೇ ಕುತ್ತಿಗೆ ಮೀರಿದೊಂದು ಹನಿ
ಮೆಲ್ಲ ಜಾರಿದ್ದು
ದಿಂಬಿನ ಮಡಿಲಾಚೆ ಪೋಳಾಗಲೆಂದು
ಒಣ ನಾಲಗೆಯ ಚಪ್ಪರಿಕೆ ನಡುವೆ!!

ಬೇಸಿಗೆಗಳು ಹೀಗೇಕೆ?
ಹಗಲು-ಇರುಳೆಂದು ನೋಡದೆ
ಸ್ಖಲಿಸುತ್ತವೆ ಉಪ್ಪು ನೀರನ್ನು;
ಹಿಂದೆಯೇ ಬಿಟ್ಟುಗೊಡುತ್ತ 
ಸುಕ್ಕು ಗುರುತುಗಳನ್ನು!!

ವಯಸ್ಸು ದಾಟಬೇಕು
ಒಂದೆರಡು ಮೈಲಿ ದೂರ
ಮರಳಿ ಹಿಂದಿರುಗಿ ಬರುವಂತೆ;
ನಾಳೆಗಳು ಹೇಗೋ 
ಎಂಬ ಅರಿವಾಗಿಸಿಕೊಂಡು
ಇಂದಿನವುಗಳ ಅನುಭವವಿಸಬೇಕು
ಇಕ್ಕಟ್ಟಿನಲ್ಲೊಂದು ಸುಖವ ತಡಕಿ 

                              --ರತ್ನಸುತ

2 comments:

  1. ಬೇಸಿಗೆಯ ವರ್ಣನೆ ಎಷ್ಟು ನೈಜವಾಗಿ ಇದ್ದದ್ದು ಇದ್ದಂತೆ ತೆರೆದಿಟ್ಟಿದ್ದೀರಿ! ಇಷ್ಟ ಆಯ್ತು!

    ReplyDelete
  2. ’ಇಂದಿನವುಗಳ ಅನುಭವವಿಸಬೇಕು
    ಇಕ್ಕಟ್ಟಿನಲ್ಲೊಂದು ಸುಖವ ತಡಕಿ ’
    ನಿಜವಾದ ಮಾತು ಗೆಳೆಯ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...