Monday, 21 April 2014

ವಿಜ್ಞಾನ ವಿಸ್ಮಯ

ದೂರದಿಂದ ಪ್ರಕಾಶಿಸುವ ನಿನ್ನ ಕಣ್ಣ
ಸಮೀಪಿಸಿದಷ್ಟೂ ಬೆವರಿಳಿಯುತ್ತದೆ
ಟೀಚರ್ ಹೇಳಿದ ಪಾಠ ಖರೆನೇ
ತಾರೆಗಳದ್ದೂ ಸೂರ್ಯನಷ್ಟೇ ಪ್ರಭಾವಳಿ!!

ಅಳತೆ ಮಾಡಲು ಅದಾವ ಉಪಕರಣವಿದೆ?
ಕಂಪನಕೆ, ವಿಸ್ತರಕೆ, ಶಾಖಕೆ, ಆಳಕೆ,
ಆರಂಭದಿಂದ ಅಂತ್ಯಕೆ, ಮೈಲಿಗಲ್ಲುಗಳ ಗುರುತಿಗೆ;
ಎಲ್ಲವೂ ವ್ಯರ್ಥ ಪ್ರಯತ್ನ, ನೋಡುವುದೇ ಸೊಗಸು!!

ಬಹುಶಃ ವಿಜ್ಞಾನದ ಆವಿಷ್ಕಾರಗಳೆಲ್ಲ
ಸಾಲು-ಸಾಲು ಅರ್ಥವಾಗುತ್ತಿವೆ ತರಾತುರಿಯಲ್ಲಿ;
ನೀ ಮೊದಲೇ ಸಿಗಬೇಕಿತ್ತು ಕಣ್ಣಿಗೆ
ಫೇಲಾಗುವ ಭೀತಿ ದೂರವಾಗುತ್ತಿತ್ತೇನೋ?!!

ನೆನಪಿನ ತರಂಗಗಳಲ್ಲಿ ಅದೆಷ್ಟು ತುಂಟ ಮಾಹಿತಿ?!!
ಒಂದೊಂದಕ್ಕೂ ಒಂದೊಂದು ಕಂಪನಾಂಕ
ಮನಸು ರೇಡಿಯೋ ಆಗಿದ್ದರೆ ಚಂದಿತ್ತು
ಬೇಕಾದಲ್ಲಿ ಟ್ಯೂನ್ ಮಾಡಿ ಮೆಲುಕು ಹಾಕುವುದಕ್ಕೆ!!

ಪ್ರಸವಿಸುವ ವಿದ್ಯುತ್ ಕಂಬಗಳ ಬೇನೆ,
ಹೆಚ್ಚು ಕಮ್ಮಿ ನನ್ನದೂ ಅದೇ ಪರಿಸ್ಥಿತಿ;
ಒಮ್ಮೊಮ್ಮೆ ಕುಲುಮೆಯ ಚಿಲುಮೆಯಂತೆ
ಚೆಲ್ಲಾಡಿಕೊಳ್ಳುತ್ತದೆ ವಿರಹಾಗ್ನಿಯ ಕಿಡಿಗಳು!!

ಲಾವಾ ರಸದ ಕುದಿ, ಸಾಗರದಡಿಯ ಭೂಕಂಪ,
ಚಂಡಮಾರುತ, ಪ್ರವಾಹಗಳ ಮೂಲಕ್ಕೆ
ನನ್ನದೇ ಕಾರಣಗಳ ಕೊಟ್ಟುಕೊಂಡಾಗ
ಒಪ್ಪುತ್ತೇನೆ, ಹಿಂದೆ ಅದೇ ಸಂಗತಿಗಳ ನಿರಾಕರಿಸಿದ್ದೆ!!

ಹೃದಯದ ಲ್ಯಾಬಿನಲ್ಲಿ ರಸಾಯನಗಳ ಬೆರೆಸಿ
ಕೊನೆಗುಳಿವ ಮಸಿಯನ್ನೇ ಮೆಚ್ಚುತ್ತೇನೆ;
ಅತ್ತ ಅಸಿಡಿಕ್ ಅಲ್ಲದ, ಇತ್ತ ಬೇಸಿಕ್ ಅಲ್ಲದ
ನ್ಯೂಟ್ರಲ್ ನೀರಾಗಿ ಉಳಿದಿದ್ದೇನೆ,
ಬತ್ತದೆ ನಿನ್ನ ಬರುವಿಕೆಗೆ ಕಾದು!!

                                              --ರತ್ನಸುತ

1 comment:

  1. ಗೆಳೆಯ ಜೀವಶಾಸ್ರ್ರವು ಕೂಡ ವಿಜ್ಞಾನದ ಭಾಗ.
    ಅಂತೆಯೇ ನಲ್ಲೆ ಉಂಟು ಮಾಡುವ ಪುಳಕವೂ ಸಹ ವಿಜ್ಞಾನದ ಸೂತ್ರ ಸಂಬಂಧಿಯೇ ಸೈ!

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...