Monday, 28 October 2019

ಬೋಳಾಗುವ ಮುನ್ನ

ಬೋಳಾಗುವ ಮುನ್ನ ಓಕುಳಿ ಹಬ್ಬ
ಚೆದುರುವ ಬದುಕಿಗೆ ಚಿಗುರಿನ ಕನಸು
ಕಾಲ್ತುಳಿತವ ಲೆಕ್ಕಿಸದ ಹಣ್ಣೆಲೆಗಳ ಪಾಳಿ
ಶರದೃತು ವರವೋ, ಶಾಪವೋ? ಅಂತೂ
ಎಲ್ಲೆಲ್ಲೂ ಅಳಿವಿನಂಚಲಿ ಸಿಂಗಾರ ಪರ್ವ

ಕೋಗಿಲೆಗೆ ದೂರದ ಆಸ್ವಾದ
ಮಣ್ಣು ಮಾಗಿದ ಸಿರಿಯನುಂಡು ಸಂತೃಪ್ತ
ಗಾಳಿ ಕದಲಿಸೋ ಮುನ್ನ ಗೇಲಿ ಮಾಡಿದರೂ
ಒಲ್ಲೆನೆನ್ನದೆ ತಲೆದೂಗಿದ ಕೊಂಬೆ
ಪರಿವರ್ತನೆಗೆ ಸಲ್ಲಿಸುತಲಿತ್ತು ಪ್ರಾರ್ಥನೆ

ಅಂದು ನೆರಳನ್ನಿತ್ತು ಇಂದು ಬಡವಾಗಿ
ಆಸೆಗಳ ಬೇಡಿ ಕಳಚಿ ಬಿಡುಗಡೆಗೆ
ಬಾನೆತ್ತರ ಹಬ್ಬಿದ ಅಹಂಕಾರ ಕಮರಿ
ಬೆಳಕಿನೆದುರಲ್ಲೇ ಬೆತ್ತಲಾಗುವ ಸಮಯ
ನೆಲಕಪ್ಪಳಿಸಿದ ನೆರಳೂ ಸವಕಲು

ರಾಜ ತಾ ಮೆರೆದು ರಾಜನಾಗುಳಿದಿಲ್ಲ
ರಾಣಿಯ ಸೌಂದರ್ಯ ಕನ್ನಡಿಯೇ ಉಂಡಂತೆ
ಮುಪ್ಪಿಗೆ ಗೋರಿಯ ಕೊಂಡಾಡೋ ಸಮಯ
ಹುಟ್ಟಿಗೂ ಮುನ್ನ ಗರ್ಭ ಧರಿಸುವ ನೇಮ
ಅಳಿದ ಗುರುತುಗಳಲ್ಲಿ ನಾಳೆಗಳ ಎದೆ ಬಡಿತ...

Thursday, 3 October 2019

ಪುಟವ ತೆರೆದಂತೆ ಹೊಸ ದಿನ

ಪುಟವ ತೆರೆದಂತೆ ಹೊಸ ದಿನ
ಪುನಃ ಮರುಕಳಿಸೋ ಪ್ರತಿ ಕ್ಷಣ
ನೆನ್ನೆ ನಾಳೆಯ ನಡುವೆ 
ತೆರೆದು ನಿಂತಿದೆ ಜಗವೇ 

ಬದುಕಿನ ಸಾರಾಂಶವೇ ನಗುವಲ್ಲಿದೆ
ಬಿಡುಗಡೆ ಸಿಗಲಾರದೆ ಬದುಕೆಲ್ಲಿದೆ..? (1)

ಹತ್ತಿರ ಕರೆದಾಗ ದೂರವೇ ಉಳಿವಂಥ
ಅಂಧಕಾರಕೆ ಬೆಳಕು ಕಾವಲಾಗಿದೆ
ಆಸೆಯ ಕಡಲಲ್ಲಿ ಮುಳುಗುವ ನೆರಳನ್ನು
ನಂಬಿದ ಅಲೆ ದಡಕೆ ನೂಕಿದಂತಿದೆ

ಕಾಡುವ ಆ ಪ್ರಶ್ನೆಯೇ ಉತ್ತರಿಸಿದೆ
ನಿನ್ನ ನೀ ಹುಡುಕಾಡಲು ಇಲ್ಲಿ ಸ್ಥಳವಿದೆ .. (2)

ಹಾರುವ ಹಂಬಲಕೆ ಕ್ಷಿತಿಜವೇ ಗುರಿಯಾಗಿ
ರೆಕ್ಕೆ ತಾಳುವ ವಯಸು ಇಂದು ನಮ್ಮದು 
ಎಲ್ಲಿಯೂ ತಲೆ ಬಾಗಿ ನಿಲ್ಲದ ಮನಸೊಂದು
ಜೊತೆಗೆ ಇದ್ದರೆ ಸೋಲು ಎದುರುಗೊಳ್ಳದು

ಜಾರುವ ಕಣ್ಣೀರಿದು ಸಾಹಿತ್ಯವೇ
ನೀರವ ಆವರಿಸಲು ಮಾಧುರ್ಯವೇ.. (3)

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...