Friday, 12 June 2015

ಒಪ್ಪಿಸಿಕೊಂಡಾದಮೇಲೆ

ನಿನ್ನ ಬಿಟ್ಟು ಬದುಕಬಲ್ಲ
ಶಕ್ತಿ ನೀನೇ ಒದಗಿಸು
ಸಾವಿನಂಚಿನಲ್ಲಿ ಚೂರು
ನಕ್ಕು ನನ್ನ ಬದುಕಿಸು

ದಿಕ್ಕು ದಾರಿ ತೋಚದಂಥ
ಊರ ಹಾದಿ ತೋರಿಸು
ಒಂಟಿತನದ ಕಷ್ಟಗಳನು
ಪಕ್ಕ ನಿಂತು ಆಲಿಸು

ಕಣ್ಣು ಕಾಣದಷ್ಟು ಸಿರಿಯ
ಕಣ್ಣ ತುಂಬ ತುಂಬಿಸು
ಎಲ್ಲವನ್ನೂ ಮೀರುವಂತೆ
ನಿನ್ನ ಚಿತ್ರ ಬಿಂಬಿಸು

ಇರುವೆ ಬಿದ್ದ ಹೊಳೆಯಲೊಂದು
ಹಣ್ಣೆಲೆಯ ಉದುರಿಸು
ಉಸಿರುಗಟ್ಟಿ ಸತ್ತ ಹೆಣವ
ದೂರ ದಡಕೆ ಮುಟ್ಟಿಸು

ಬದುಕಿನಾಚೆ ಬದುಕುವುದಕೆ
ಬದುಕಲೆಂತೋ ರೂಪಿಸು
ನನ್ನ ಗುರುತಿನೆಲ್ಲೆ ತುಂಬ
ನಿನ್ನ ಗುರುತ ವ್ಯಾಪಿಸು!!
                              -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...