Monday, 19 October 2015

ಹಾಳೆಯ ಹೂವು


ಬರೆಯಲೇ ಬೇಕೆಂದು ಹಠಕ್ಕೆ ಬಿದ್ದಾಗ
ಬರೆವುದೆಲ್ಲವೂ ಸಪ್ಪೆ
ತಾನಾಗೇ ಬರೆಯಿಸಿಕೊಳ್ಳುವ ಒಂದು ಪದವಾದರೂ
ಕಾವ್ಯ ಕುಪ್ಪೆ

ಬರೆವ ನಾನೊಬ್ಬನೇ ಬಲ್ಲವನೆಂದನಿಸಿದೊಡೆ
ಬರೆಯದಿರುವುದೇ ಒಳಿತು
ಬರೆವುದೇ ಆದರೆ ಬರಿದಾಗಬೇಕು ನಾ
ಬರಹದಲಿ ಮಿಂದು ಬೆರೆತು

ಅರೆ-ಬರೆ ಬರೆವುದು, ಭಾರಿ ಏನಲ್ಲ ಇದು
ಬರಿ ಮೌನದೊಂದು ಛಾಯೆ
ಬರೆದಷ್ಟೂ ಬರಿದಾಗದ ಭಾಷೆ ನನ್ನದು
ಏನಿದರ ಮರ್ಮ ಮಾಯೆ?!!

ಬರವಿಲ್ಲ, ನೆರೆಯಿಲ್ಲ ಬಂದಷ್ಟೂ ಸಿರಿಯೇ

ಇರದಲ್ಲಿಯೂ ಸುಸ್ಥಿತಿ
ಎಲ್ಲ ಮುಗಿದಿರಲೊಂದು ಮತ್ತೆ ಮೊದಲಾಗಲು
ಹಿಡಿದಂತೆ ತಿಳಿ ಆರತಿ

ಬನ್ನಣೆಗೆ ಬಣ್ಣ, ಬವಣೆಗೂ ಬಾಣ
ಬಿನ್ನವಿದು ಭಾವಗಳಿಗೆ
ಹೆಸರಿಡಲು ಮತ್ತಷ್ಟು ಮೆರುಗು ಮೂಡುವುದು
ಹಾಳೆಯ ಹೂವುಗಳಿಗೆ!!

                                      --
ರತ್ನಸುತ

No comments:

Post a Comment

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...