Monday, 4 April 2016

ಕಟ್ಟದ ಕವಿತೆ

ಒಂದು ಕವಿತೆ ನೋಡಿದೆ
ನೋಡಿದೆನಷ್ಟೇ ಓದಲಿಲ್ಲ
ಓದದೆಯೇ ಮನ ಮುಟ್ಟಿತು
ಎದೆಯ ಬಡಿತವ ಎಚ್ಚರಿಸಿತು
ಬದುಕಲೊಂದು ಕಾರಣವ
ಮೌನ ಸಂಭ್ರಮದಲ್ಲಿ ಮುಳುಗಿಸಿತು
ಕವಿತೆಯದ್ದು ಇನ್ನೂ ಕಟ್ಟುವ ಹಂತ
ಆಗಲೇ ಇಷ್ಟವಾಗಿಹೋಗಿತ್ತು



ಶೀರ್ಷಿಕೆ ಇರದ ಕವಿತೆ
ತೋರಿಕೆ ಬಯಸದ ಕವಿತೆ
ತನ್ನಿಡಿ ಆಕಾರವೇ ಜೀವ ಕೋಶ
ತಾ ಚಲಿಸುತ, ನಾ ವಿಚಲಿತ
ಕಣ್ಣು ತುಂಬಿತು ಕವಿತೆ
ಹೊಮ್ಮಿ ಬಂದುದ ಮರೆತೆ
ಪ್ರೀತಿಯ ಕಾರ್ಯರೂಪ
ಅದುವೇ ನಿಜದ ಕಾವ್ಯ ರೂಪ



"ಕವಿತೆ ನಾವು ಕಟ್ಟುವುದಲ್ಲ
ತಾನಾಗೇ ಹುಟ್ಟುವುದು"
ಎಷ್ಟು ನಾಜೂಕಾಗಿ ವಿವರಿಸಿ
ಅಸ್ಮಿತೆಯ ಪ್ರಹರಿಸಿತು ಕವಿತೆ
ಕಟ್ಟುವ ಕೆಲಸ ಕೊಟ್ಟು
ಈಗ ಹುಟ್ಟುವೆ ಇಗೋ ಎಂದು
ಕವಿತೆ ಜನ್ಮ ತಾಳುತ್ತಿದೆ
ಕವಿತೆ ಜನ್ಮ ನೀಡಿತ್ತಿದೆ



ಸದ್ದು ಮಾಡುವ ಕವಿತೆ
ಕದ್ದು ಕೇಳುವ ಕವಿತೆ
ಕವಿತೆ, ಕವಿತೆ, ಕವಿತೆ
ಎಲ್ಲೆಲ್ಲೂ ಕವಿದಂತೆ ಕವಿತೆ



ಮೊದಲುಗಳ ಹಿಂದಿಕ್ಕಿ ಮೊದಲಾಗಿ
ಹಗಲಿರುಳು ಕಾಯಿಸುವ ಕವಿತೆ
ಕಣ್ಣೆದುರಿದ್ದೂ ಕೈಗೆಟುಕದ ತಿನಿಸು
ಹಠದಲ್ಲೇ ತಟವಾಗಿ ಕುಳಿತೆ



ಮುಂಬರುವ ಪ್ರಶ್ನೆಗಳ ಉತ್ತರ
ಮಂಪರಿಗೆ ಜೋಗುಳದ ಇಂಚರ
ತಿಳಿನೀರ ಕೊಳದೊಳಗ ಚಂದಿರ
ವರದಂತೆ ಅವತರಿಸೋ ಮಂದಿರ,
ಕವಿತೆ ಸಾಧ್ಯವಾಗಿಸಬಲ್ಲದು
ಎಲ್ಲವನ್ನೂ
ಕವಿತೆ ಕವಿಯಾಗಿಸಬಲ್ಲದು
ನೋಟವನ್ನೂ!!

                        
                            - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...