Wednesday, 13 April 2016

ತಾಯಿಯ ಜನನ


ಮುದ್ದು ಮೊಗದ ರಾಜಕುಮಾರಿ
ಈಗಷ್ಟೇ ರಥ ಬೀದಿಯ ಸುತ್ತಿ
ಕೆನ್ನೆ ಕೆಂಪಾಗಿಸಿಕೊಂಡು ಇಳಿದಂತೆ
ಎದೆಗಿಟ್ಟಳು ಗುರುತ!!



ಚಾಮರಕ್ಕೆ ತಲೆದೂಗಿ ಪಕಳೆ
ನವಿರಾಗಿ ಪಟ-ಪಟ ಕದಲಿದಂತೆ
ಬೆರಳುಗಳ ನಡುವಲ್ಲಿ ಸೂರ್ಯರು
ಒಬ್ಬೊಬ್ಬರಾಗಿ ಉದಯಿಸಿದಂತೆ
ನವ ಮುಂಜಾವಿನ ಸ್ಪರ್ಶದ
ಹರಳನ್ನು ಕೆನ್ನೆಗೊತ್ತಿಕೊಂಡಂತೆ
ಆಹ್!! ಹಸ್ತವ ಸವರಿದಲ್ಲಿ
ಆತ್ಮದ ಅಹಂಭಾವಕ್ಕೆ ಕಿಚ್ಚು!!



ಶಾಸನಗಳ ಹೊರಡಿಸುವ ನಾಲಗೆಗೆ
ಮೊದಲ ಜಿನುಗಿನ ಪರಿಚಯ
ಹಿಗ್ಗಿ-ಹಿಗ್ಗಿದಂತೆಲ್ಲ ಮುಗ್ಗರಿಸುವ
ರೆಪ್ಪೆ ಚಿಪ್ಪಿನೊಳಗೆ ಶುದ್ಧ ನಿಶೆ
ಅಲ್ಲಿ ಕನಸಿನ ತಕರಾರುಗಳಿಲ್ಲ
ಲೋಕದ ಪರಿವೇ ಇಲ್ಲ.
ಹಸಿವಿಗೊಂದು ಅಳುವಿನ ಮನವಿ
ನಂತರ ನಿದ್ದೆಯೇ ಸವಿ!!



ಶಾಂತ ಸರೋವರದಲ್ಲಿ
ಹಾರಿ ಬಿದ್ದ ಪುಟ್ಟ ಹೂವಿನ ಸದ್ದು
ಹೂವಿನದ್ದೋ? ನೀರಿನದ್ದೋ?
ಒಟ್ಟಾರೆ ಅರಳುವುದು ನೀರೊಡಲು.
ತರಂಗದಂತೆ ನಗು
ಮೂಡಿದಷ್ಟೇ ಶಾಂತವಾಗಿ
ಮತ್ತದೇ ಮೌನ
ಹೂವೋ? ತುಟಿಯೋ ಉಳಿದದ್ದು?!!



ಜನಿಸಿದಳು ತಾಯಿ
ತಾಯಿ ತಾ ತಾಯಿಯ ಪೊರೆದಂತೆ
ತಾಯ್ತನವ ಸವಿದ ತಾಯಿ!!

                                  
                               - ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...