Saturday, 20 January 2018

ಮಗುವಿನಂತೆ ಅತ್ತು ಬಿಡುವೆ


ಮಗುವಿನಂತೆ ಅತ್ತು ಬಿಡುವೆ, ಹಠಕೆ ಬಿದ್ದು ಗಾಯಗೊಳುವೆ
ಬಾಚಿ ನನ್ನ ತಬ್ಬಿಕೊಂಡು ಮುದ್ದು ಮಾಡಿ ಬಿಡುವೆಯಾ?
ಸುತ್ತ ಸತ್ತ ಮೌನವೆಂಬ ಅಂಕೆಯೊಂದು ಕಾಡುವಾಗ
ಒಂದು ಪಿಸು ಮಾತಿನಲ್ಲಿ ಸದ್ದು ಬಡಿಸೆ ಬರುವೆಯಾ?


ನೋವನುಂಡು ಉಂಡು ತೇಗಿಕೊಂಡರೂ ಅದರದ್ದೇ ಛಾಯೆ
ನಿತ್ಯ ಖುಷಿಯ ಪಾಯಸಕ್ಕೆ ನಿನ್ನ ನೆರಳ ಸೋಕಿಸು
ಅಲ್ಲಿ ಇಲ್ಲಿ ಚೆದುರಿ ಚೆಲ್ಲಿ ಮರೆತು ಹೋದ ಹಿತವನೀವ
ನೆನಪುಗಳ ನಿನ್ನ ಸೆರಗ ಅಂಚಿನಲ್ಲಿ ಪೋಣಿಸು



ಖಾಲಿ ಬಿಟ್ಟ ಸ್ಥಳಗಳಲ್ಲಿ ನಿನ್ನ ಹೆಸರ ತುಂಬಿಸಿರುವೆ
ಜಂಭದಲ್ಲಿ ಬೀಗುತಿಹುದು ನನ್ನ ಬಾಳ ಪುಸ್ತಕ
ಹಗಲುಗಳ ನಿನ್ನ ಕೊಂಡಾಟಕೆಂದೇ ಮೀಸಲಿಟ್ಟೆ
ರಾತ್ರಿ ಕನಸಿನಲ್ಲೂ ನಿನ್ನ ಬಣ್ಣಿಸುವ ಸೇವಕ



ಹೊನ್ನ ರಷ್ಮಿ, ಜೊನ್ನ ಸಾಲು ನಿನ್ನ ಆಗಮನದಿಂದ
ಎನ್ನ ನಿನ್ನ ಹೊರತುಪಡಿಸಿ ಗುರುತಿಡುವುದು ಅಸದಳ
ಮೊದಲೇ ನಿನ್ನ ಗುಂಗಿನಲ್ಲಿ ಲೀನನಾದ ವ್ಯಸನಿ ನಾನು
ಅದಕೂ ಮೇಲೆ ಕೊಡುತಲಿರು ನಿತ್ಯ ಹೊಸತು ನಶೆಗಳ



ಹೆಚ್ಚು ಕಡಿಮೆ ಎಲ್ಲವನ್ನೂ ಬರೆದೇ ತೀರಿಸಿಕೊಂಡೆ
ತೀರದ ದಣಿವನ್ನು ತಣಿಸೆ ನಿನ್ನ ದಾರಿ ಕಾಯುವೆ
"ಸತ್ತು ನೋಡು" ಎಂದು ನೀ ಸವಾಲನ್ನು ಹಾಕದಿರು
ಲಘುವಾದರೂ ನಿನ್ನ ಮಾತಿಗಾಗಿ ಸತ್ತೇ ತೀರುವೆ!!



                                                     - ರತ್ನಸುತ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...