Saturday, 20 January 2018

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು


ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು
ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ
ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ
ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ

ಬೀಸಣಿಕೆ ಹಿಡಿ ತುಂಬ ನಿನ್ನದೇ ಬೆರಳಚ್ಚು
ಗರಿಯ ತುಂಬ ನೀ ಮುಡಿದ ಹೂವಿನ ಘಮ
ಬೀಸುವ ಗಾಳಿಗೆ ಏ.ಸಿ ಕೆಟ್ಟಂತಿದೆ
ನೀ ಸೋಕಿ ಬಿಟ್ಟವೆಲ್ಲವೂ ನಿನ್ನ ಸಮ

ನೋಡಲ್ಲಿ ನಡು ರಾತ್ರಿ ಚಂದಿರನೂ ಬಡಪಾಯಿ
ಹೊಗಳುಬಟ್ಟರ ಕೊರತೆ ಎದ್ದು ಕಂಡು
ಪ್ರಾಸದಲಿ ಹಾಡುವೆ ಗುತ್ತಿಗೆ ಪಡೆದಂತೆ
ಸಾಲುಗವಿತೆಗಳೆಲ್ಲ ನಿನ್ನವೆಂದು



ಕಚ್ಚಿ ಕೊಡುವೆ ಸೇಬ, ಬಿಚ್ಚಿ ಇಡುವೆ ಜೇಬ
ಎಲ್ಲ ಇಚ್ಛೆಗೂ ಮುನ್ನ ನಿನ್ನ ಗಮನ
ನಿನ್ನ ಗಲ್ಲಕೆ ಇಟ್ಟ ಚುಕ್ಕಿ ಮಸಿಯಲಿ ನಾನು
ಗುಟ್ಟಾಗಿ ಬರೆದಿಡುವೆ ಪ್ರೇಮ ಕವನ



ಕೂಡಿ ಹಾಕುವೆ ಏಕೆ ಮನದ ತುಮುಲಗಳನ್ನು
ಜೀವ ಕೊಳದ ತಳದ ಭಾವ ಮೀನೇ?
ನನ್ನ ನಾ ಕಳೆದುಕೊಂಡಿರೋ ಅಷ್ಟೂ ಗಳಿಗೆಯಲಿ
ನಿನ್ನ ಸಿಹಿ ನೆನಪೊಂದು ಸಹಿಯು ತಾನೆ?!!



                                          - ರತ್ನಸುತ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...