Wednesday, 2 January 2019

ನಿನ್ನ ಕಣ್ಣೊಳಗೆ ನಿದ್ದೆಯಾಗುವಾಸೆ ಗೆಳೆಯ

ನಿನ್ನ ಕಣ್ಣೊಳಗೆ ನಿದ್ದೆಯಾಗುವಾಸೆ ಗೆಳೆಯ
ಅದೆಷ್ಟು ಮುದ್ದು ನೀ ಮಲಗಿರುವಾಗ?!
ಅದಕ್ಕೂ ಮೇಲೆ ನೀ ಎಚ್ಚರವಾಗಿ ಮೈ ಮುರಿವಾಗ
ಆಗಸ ನಿನ್ನ ಕೈ ಬೆರೆಳ ತಾಕಲು ಹವಣಿಸಿ
ಸೋತು ತಲೆ ಬಾಗಿದಂತೆ ಬೆಚ್ಚನೆಯ ಭಾವ

...
ಕಿರಿದಾದ ಅಂಗೈಯ್ಯ ತುಂಬ ಬಾಚಿ ಕೊಟ್ಟೆ
ಹಿಡಿಯಷ್ಟು ನಲ್ಮೆಯ, ಅದು ಜೀವಮಾನಕ್ಕಾಗುವಷ್ಟು.
ಅಸಲೆಲ್ಲ ನಿನ್ನದೇ, ಒಲವ ಬಡ್ಡಿ ಸಂದಾಯ ಮಾಡಲಾಗದೆ
ನಿನ್ನ ಋಣದಲ್ಲೇ ಬದುಕುವ ಸಾಲಗಾರನಾಗಿ
ಹೆಗಲನ್ನೇ ಮೀಸಲಿಡುವೆ ನಿನ್ನ ಕನಸುಗಳಿಗೆ



ಮಾತಿಗೆ ಮರು ಮಾತು ಬೆಳೆಸುವವನಾಗಿರುವೆ
ಭಾವಕ್ಕೆ ಅನುಭಾವ ಬೆರೆಸುವ ಕವಿಯೇ
ನಿನ್ನ ಅಳುವಲ್ಲಿಯ ರಾಗವೂ ಶೃತಿ ಶುದ್ಧವಾಗಿ
ಕರಣಗಳನ್ನೇ ಕರಗಿಸುತ್ತಿರುವಾಗ, ಮನಸಿನ್ನು ಯಾವ ಲೆಕ್ಕ?
ನಿನ್ನ ಆಟೋಪಚಾರದಿಂದಲೇ ಆಟಿಕೆಗಳಿಗೆ ರೆಕ್ಕೆ-ಪುಕ್ಕ!!



ಸ್ವಲ್ಪ ತಾಳೆನ್ನುವಷ್ಟರಲ್ಲಿ ಎಲ್ಲೊ ತೇಲುವ ಮೇಘ
ತಾಳಕ್ಕೆ ಮಣಿದವನಂತೆ ಇಳಿದು ಬರುವ ವರುಣ
ರುಚಿಯೇನೆಂಬುದರ ಪರಿಚಯವಿತ್ತ ಮಣ್ಣು
ಶುಚಿಯನ್ನೇ ಒಪ್ಪದ ಕಲ್ಮಶರಹಿತ ಕೆಸರು/ಮಸಿ
ಗೆಳೆಯ-ಗೆಳತಿಯರೆಲ್ಲ ನಿನಗೆ ಅಚ್ಚು ಮೆಚ್ಚು!!



ಬೆಣ್ಣೆ ಕಡಿಯುವ ಕೋಲು, ನಿನ್ನ ಕೈಯ್ಯಲಿ ಬಿನ್ನ
ಕೊಳಲು ಗಾಳಿಯ ಕಡಿದು, ನಿನ್ನ ತಲುಪುವ ಮುನ್ನ
ಹಿತ್ತಲ ಹೂ ಗಿಡ, ಬಚ್ಚಲ ಊದುಗೊಳವೆ
ಅಡಿಗೆ ಕೋಣೆಯ ಕಣಜ, ಪಡಸಾಲೆ ರಂಗೋಲಿ
ಎಲ್ಲವನ್ನೂ ದಿನಕ್ಕೊಮ್ಮೆ ಮುಟ್ಟಿ ಬರಬೇಕೆ?



ಬರಿಗಾಲಲಿ ನಡೆದ ನೆಲಕಿಲ್ಲ ಬರಗಾಲ
ಒದ್ದೆ ಹಾಸಿಗೆಯೊಳಗೆ ನಿನ್ನವೇ ನೆನಪೆಲ್ಲ
ಬೆತ್ತಲಾಗಲು ಬಿಡದ ಬಟ್ಟೆ ವೈರಿ ನಿನಗೆ
ಕತ್ತಲೆಂದರೆ ಗುಮ್ಮನೆನ್ನುವ ನಿನ್ನೊಳಗೆ
ದಿನಕೊಂದು ಹೊಸ ರೂಪ, ಹೊಸ ಬಣ್ಣ, ಹೊಸ ಕಾಂತಿ
ಗೆಳೆಯ, ನೀನೊಂದು ಅಪರೂಪದ ನೈಜ್ಯ ಸ್ವಪ್ನ!!

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...