Wednesday, 2 January 2019

ಕಣ್ಣು ಮಂಜಾಗಿದೆ


ಕಣ್ಣು ಮಂಜಾಗಿದೆ ಇನ್ನೂ ಚೂರು ಸನಿಹ ಬಾ
ಕಾಣಬೇಕು ನಿನ್ನ ಮುಖ ಕಣ್ಗಳ ಸಾಂತ್ವಾನಕೆ
ಆಗಲೇ ಮಿಂದಾಗಿದೆ ಇನ್ನಷ್ಟು ಮುಳುಗಲಾರೆ
ದೀಪ ಹಚ್ಚಿಕೊಂಡರೂ ದಿಗಿಲು ಅಂಧಕಾರಕೆ

...
ಕಾಡುಗಿಚ್ಚ ನಡುವೆ ಹೆಚ್ಚು ಮಾತುಗಳು ಮೂಡವು
ಬಿಕ್ಕಳಿಕೆಗೆ ಸಿಕ್ಕಿ ಒಡೆದ ಹಾಡು ಅರ್ಥವಾಗದು
ಸದ್ದಿನಲ್ಲಿ ಆದ ನೋವು ಹಾಗೇ ಉಳಿಯಿತಾದರೆ
ಮೌನವನ್ನೂ ಲಘುವಾಗಿ ಪರಿಗಣಿಸಬಾರದು



ಗೋಡೆ ತುಂಬ ಗೀಟು ಎಳೆದು ಲೆಕ್ಕೆವಿಟ್ಟೆ ಏತಕೆ?
ಆದ ಜಗಳ ಲೆಕ್ಕ ಮೀರಲೆಂಬುದೆನ್ನ ಕೋರಿಕೆ
ಮೇರು ತುದಿಯ ತಲುಪಿ ಆಯ್ತು ಜಾರೋ ಬಂಡಿ ಆಟದಿ
ಜಾರಿ ನೆಲವ ಮುಟ್ಟಲೇಕೆ ನಿಮಿಷಕೊಂದು ಪೀಠಿಕೆ?



ಹೂವ ಕಿತ್ತು ಕಟ್ಟಿ ಇಡುವೆ ಸಂಜೆಗೊಂದು ನೆಪವನು
ಯಾವ ಬಾಗಿಲಿಂದ ಹೊತ್ತು ತರುವೆ ಹೇಳು ನಗುವನು
ಸುಳ್ಳಿಗೊಂದು ಸುಳ್ಳು ಸೇರಿ ಬೆಲ್ಲದಚ್ಚು ಕರಗಿತು
ತೇಲೋ ಮೋಡವನ್ನು ತಬ್ಬಿ ತೊಲಗಿ ಬಿಡಲಿ ಚಂದ್ರನು



ತಾಳು ಒಂದು ಪ್ರಶ್ನೆಯಿದೆ ಹೇಳಿ ಹೋಗು ಉತ್ತರ
ಸಾಲು ಸಾಲು ಗೋಜಲನ್ನು ಬಿಡಿಸಿಕೊಂಡು ಕೂರುವ
ನನ್ನ ಕೈ ಎಂದೂ ಮುಂದು ನಿನ್ನ ಬೆವರ ತೀಡಲು
ನಿನ್ನ ಮೇಲೆ ನನಗೆ ಅಧಿಕಾರದಲ್ಲೂ ಗೌರವ!!

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...