Wednesday, 2 January 2019

ಎಲ್ಲಿ ಸದ್ದು ಸಮರದಲ್ಲಿ ಸೋತಿತೋ

ಎಲ್ಲಿ ಸದ್ದು ಸಮರದಲ್ಲಿ ಸೋತಿತೋ
ಅಲ್ಲೇ ಮೌನ ವಿಜಯವನ್ನು ಹೊಂದಿತು
ಎಲ್ಲಿ ನಿಂತ ನೀರು ಚೂರು ಕದಲಿತೋ
ಅಲ್ಲಿ ಕೋಟಿ ಜೀವ ಉರಿಸ ಕಂಡಿತು

...
ಎಲ್ಲಿ ಕನಸು ನಿದ್ದೆಯನ್ನು ಕೆಡಿಸಿತೋ
ಇರುಳ ವ್ಯಾಪ್ತಿ ಪೂರ್ತಿ ಅರ್ಥವಾಯಿತು
ಎಲ್ಲಿ ಕ್ಷಣದ ಮುಳ್ಳು ಎದೆಯ ಹೊಕ್ಕಿತೋ
ಸವೆದ ಕಾಲ ಕೈಯ್ಯ ಹಿಡಿದು ಸವೆಸಿತು



ಯಾವ ದೀಪ ತನ್ನ ತಾನೇ ಜ್ವಲಿಸಿತೋ
ನೆರಳು ನಾಟ್ಯ ಕಲಿತು ಬಳುಕದೊಡಗಿತು
ಯಾವ ಕಣ್ಣ ಹನಿಯ ಶಾಪ ತಟ್ಟಿತೋ
ಮರುಕದಲ್ಲೂ ಕಣ್ಣು ಬಿರುಕು ಬಿಟ್ಟಿತು



ಹೂವು ಬಾಡಿದಷ್ಟೂ ಗಂಧ ಸೋತರೆ
ಕಳೆದ ಬಳ್ಳಿ ಬೇರು ಜಿನುಗದೊಡಗಿತು
ಬೇವು ಮರದ ಮೇಲೆ ಗೂಡ ಕಟ್ಟಿಯೂ
ಹಕ್ಕಿ ಹಾಡಿ ಕಿವಿಗೆ ಜೇನ ಉಣಿಸಿತು



ಸುಪ್ತವಾದ ಸಂಜೆಯಲ್ಲಿ ಮೂಡುವ
ಆತ್ಮ ಉತ್ಖನನ ಲೇಖ ಇಲ್ಲಿದೆ
ಶಕ್ತಿಹೀನ ಪರದೆ ಹಿಂದೆ ಅವಿತಿರೋ
ಪದಗಳನ್ನೂ ಕವಿತೆಯಾಗಿ ಮಾಡಿದೆ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...