Wednesday 2 January 2019

ಚಂದಿರನ್ನ ತಂದು ನಿನ್ನ ...

ಚಂದಿರನ್ನ ತಂದು ನಿನ್ನ
ಎದುರು ನಿಲ್ಲುವಂತೆ ಮಾಡಿ
ಹತ್ತು ಬಾರಿ ಬಸ್ಕಿ ಹೊಡಿಸಿ
ಕ್ಷಮೆ ಕೇಳ ಹೇಳಲೇ?
ಹೇ ಮುನಿದುಕೊಂಡ ಕಡಲೇ...

ಹೇಳು ಇನ್ನೇನು ಬೇಕು
ನಿನ್ನೊಲವ ಅಲೆಗೆ ಸಿಲುಕಿ
ಈಜು ಮರೆತು ಮುಳುಗಲೇ?



ಅಷ್ಟೂ ರಾತ್ರಿಯಲ್ಲೂ ನೀನು
ಕನಸಿನಲ್ಲಿ ಬಾರದಂತೆ
ನನ್ನ ನಿದ್ದೆ ಕೆಡಿಸದಂತೆ
ದೂರ ಉಳಿದೆ ಏತಕೆ?
ನೋಡೀಗ ಬೆಳಕು ಹರಿದು
ತಪ್ಪಿತಸ್ಥ ಎನ್ನುತಿದೆ
ಕುಗ್ಗಿ ಹೋಯಿತೀಗ ನೆರಳೂ
ಏರಿದೆದೆಯ ಭಾರಕೆ!



ತಲ್ಲಣಕ್ಕೆ ಸಿಕ್ಕಿ ಈಗ
ಬೆಲ್ಲದಚ್ಚು ಕಳೆದ ಹಾಗೆ
ಮೆಲ್ಲ ಜಾರಿಕೊಂತು ಋತುವು
ಸಾಂತ್ವಾನ ಹೇಳದೆ
ನಿನ್ನ ಮೌನ ಮುರಿಯದಿರಲು
ನನ್ನ ಮನದ ತೋಟದಲ್ಲಿ
ಚಿಟ್ಟೆಯೊಂದೂ ತಂಗದಂತೆ
ಮೂತಿ ಮುರಿದು ಹಾರಿವೆ!



ಉಗುರು ತಾಕಿ ಗಾಯವಾದ
ಹೃದಯವೊಂದ ಈಚೆ ತೆಗೆದು
ಉಗುರ ಕಚ್ಚಿಕೊಂಡೇ ಅದಕೆ
ಮುಲಾಮನ್ನು ಮೆಲ್ಲಿಸು!
ಆತುರಕ್ಕೆ ರೆಕ್ಕೆ ಕೊಟ್ಟು
ಹಾರ ಬೇಡ ಸಿಕ್ಕ ವೇಳೆ
ಗೋಜಲೆಂಬ ಗೀಜು ಒರೆಸಿ
ಕಣ್ಣಿಗುಸಿರ ಸಲ್ಲಿಸು!



"ಕಟ್ಟ ಕಡೆಯ ಬಯಕೆಯನ್ನು
ನೀಗಿಸೋಕೂ ನೀನೇ ಬೇಕು"
ಎಂಬ ಬಯಕೆಯನ್ನು ಹೊತ್ತು
ನನ್ನ ಹೆಗಲ ಏರಿಕೋ
ಗಾಳಿಯಲ್ಲಿ ಸುಪ್ತವಾಗಿ
ಜೀವ ಕಣದ ಶಕ್ತಿಯಾಗಿ
ಶ್ವಾಸ ಉಚ್ಚಾರವನ್ನು
ನಿನ್ನಿಷ್ಟಕೆ ತಿದ್ದಿಕೋ!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...