Wednesday, 2 January 2019

ನಿನಗೆ ತಿಳಿಯದಿದ್ದೇನಿದೆ ಹೇಳು
ರಾತ್ರಿ ಗೊರಕೆ ಹೊಡೆಯುವೆನೆಂದು
ಶಪಿಸುತ್ತಲೇ ನಿದ್ದೆಗೆ ಜಾರುವ ನೀನು
ನನ್ನ ಕನಸಿನ ರಾಯಭಾರಿ ಎಂದರೆ
ನಸುನಕ್ಕು ಮೊಟಕುತ್ತೀಯ...

ಅದು ಸುಳ್ಳೆಂದು ಗೊತ್ತಿದ್ದರೂ
ಚೂರು ನಾಚುತ್ತಲೇ ಮೈ ಮರೆಯುತ್ತೀಯ
ನನಗೆ ಅರ್ಥವಾಗುವ ಭಾಷೆಯಲ್ಲಿ ಲೇವಡಿ ಮಾಡಿ...



ನಿನಗೆ ತಿಳಿಯದಿದ್ದೇನಿದೆ ಹೇಳು
ಪ್ರತಿ ಸಲ ಬೇಕಂತಲೇ ವಾದ ಮಂಡಿಸಿ
ನಿನ್ನ ಸೋಲಿಸಲು ಹುರುಪು ತುಂಬುವವಳು ನೀನೇ
ಎಂಥ ಮೂರ್ಖನನ್ನಾಗಿಸಿದ್ದೀಯ ಗೊತ್ತೇ ನನ್ನ?
ಒಮೊಮ್ಮೆ ಜಗಳದಲ್ಲಿ ಗೆದ್ದ ಅಹಮ್ಮಿನಾಚೆ
ನಿನ್ನ ಚಿವುಟಿದ ನೋವಿನೊಳಗೆ ನೀ ನಗುತ್ತೀ
ನನಗಷ್ಟೇ ಸಾಕು ಬಿಕ್ಕಿ-ಬಿಕ್ಕಿ ಅಳಲಿಕ್ಕೆ
ತೋರಿಸಿಕೊಳ್ಳದ ಗುಟ್ಟನ್ನು ಅದು ಹೇಗೆ ಬಿಡಿಸುವೆ?



"ಹೌದು ನಾನು ಇರುವುದೇ ಹೀಗೆ"
ಹೀಗಂದ ಪ್ರತಿ ಬಾರಿ ಮರೆಯುತ್ತೇನೆ
ನಾನು ನಿನಗೆ ಬೇಕಾದ ಹಾಗೆ ಬದಲಾಗಿದ್ದೇನೆಂದು
ಇದು ನಿನಗೆ ತಿಳಿದೂ ತಳಮಳಗೊಳ್ಳುತ್ತೀಯಲ್ಲ
ಅಷ್ಟು ಸಾಕು ಕೆಸರೆರಚಾಟಕ್ಕೆ
ನನಗೇ ಸೋತವಳು, ನನ್ನ ಮಾತಿಗೆ ಸೋತರೆ ಬೇಜಾರೇ?



ಬಿಡು, ಎಷ್ಟೋ ಸಲ ಮಾತು ಕೊಟ್ಟು ತಪ್ಪಿದ್ದೇನೆ
ಅಷ್ಟಕ್ಕೂ ನನ್ನ ನಂಬಿದ್ದು ನಿನ್ನ ತಪ್ಪು
ಆಸೆ ಗೋಪುರದೊಳಗಿಟ್ಟು ಪೂಜೆಗೈದಿದ್ದು ಸಾಕು
ವಾಸ್ತವಕ್ಕೆ ಮರಳಿ ನನ್ನ ಇನ್ನಷ್ಟು ಕೆಣಕು
ನಿನಗೆ ಬೇಕಾದ ಫಲ ತಪಸ್ಸಿಗೆ ಸಿದ್ಧಿಸುವಂತದ್ದಲ್ಲ
ಅದು ಬಲವಂತಕ್ಕೇ ದಕ್ಕುವುದೆಂದು ನಿನಗೂ ತಿಳಿದಿದೆ



ನೀ ದೂರ ಸರಿದಷ್ಟೂ ಹತ್ತಿರವಾಗುವೆ
ನೀ ಜೋರು ಮಾಡಿದಷ್ಟೂ ಮೆದುಗೊಳ್ಳುವೆ
ನನ್ನ ಗೆದ್ದ ನಿನಗೆ ಶರಣಾಗಿದ್ದೇನೆ
ನಿನಗೆ ಬೇಕಾದ ಹಾಗೆ ತಿದ್ದಿಕೋ
ಆದರೆ ನೆನಪಿಡು.. ನಾ ಸುಲಭಕ್ಕೆ ತಿದ್ದಿಕೊಳ್ಳುವವನಲ್ಲ
ನಿನಗೆ ತಿಳಿಯದಿದ್ದೇನಿದೆ ಹೇಳು...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...