Wednesday, 2 January 2019

ಗಡಿಯಾರದ ಮುಳ್ಳಂತೆ ಮನಸು

ಗಡಿಯಾರದ ಮುಳ್ಳಂತೆ ಮನಸು
ಕ್ಷಣವಾದರೂ ಸುಮ್ಮನಿರದು
ಗಡಿಪಾರು ಆಗೋಕೂ ಮೊದಲೇ
ನಿನ್ನೆಲ್ಲ ಆಸೆಗಳ ತಿಳಿಸು
ಒಂದೊಮ್ಮೆ ಕೇಳಿಸದೆ ಇರಲು...

ಮತ್ತೊಮ್ಮೆ ಪಿಸುಗುಟ್ಟಿ ವಾಲು
ಹೃದಯಕ್ಕೆ ಬಿಗಿದು ಲಗಾಮು
ನೀಡು ಒಂದೊಂದೇ ಸವಾಲು



ಉಪಕಾರ ಬೇಕಿಲ್ಲ ಈಗ
ಸಹಕಾರ ನೀಡುತಿವೆ ಕನಸು
ಹಾಗೂ ಬೇಕೆಂದರಲ್ಲಿ
ನೀನಾಗೇ ಕೈ ಹಿಡಿದು ನಡೆಸು
ಹಿಂದೆಲ್ಲ ನಾ ಸುಮ್ಮನಿರಲು
ಸುಮ್ಮನೆ ಬಿಡುತಿತ್ತು ಕಾಲ
ಏತಕೋ ಈಗೀಗ ತಾನೂ
ಚೂರೇ ಬಿಚ್ಚುತಿದೆ ಬಾಲ



ಆ ರಾತ್ರಿ ನೆನಪಿದೆಯಾ ನಿನಗೆ
ಇಬ್ಬರೂ ಅತ್ತಿದ್ದೆವಲ್ಲಿ
ಕೊನೆಗೆ ಕಂಬನಿಯು ಬೆವೆತು
ಬೆವರಲ್ಲಿ ಬೆರೆತಷ್ಟೂ ಹೋಳಿ
ಅದೃಷ್ಟ ಮಾಡಿದವು ನೆನೆಪು
ಆಗಾಗ ಬಿಚ್ಚಿಕೊಂತಾವೆ
ಸಂಜೆಯ ಹೂವಿಂದ ಹಿಡಿದು
ಆಸೆಗಳೂ ಅರಳಿ ಕುಂತಾವೆ



ಎಷ್ಟುದ್ದ ಗೀಚಿದರೂ ಕೂಡ
ಕೊನೆ ಚುಕ್ಕಿಗೇ ಎಲ್ಲ ಘನತೆ
ಹಾಗಾಗಿ ಚುಕ್ಕಿಯನ್ನಿಟ್ಟೇ
ಪದ್ಯಕ್ಕೆ ಬಿಡುಗಡೆಯ ಕೊಟ್ಟೆ
ಕನ್ನಡಿಯೂ ಕಣ್ಣನ್ನು ಮುಚ್ಚಿ
ಬಾಗಿದೆ ನಮ್ಮೊಲವ ಎದುರು
ಆಟದಲಿ ಮೆರುಗಿರಲಿ ಎಂದೇ
ದೀಪವೂ ನಿಲ್ಲಿಸಿದೆ ಉಸಿರು!!

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...