Wednesday, 2 January 2019

ಎಲ್ಲ ಮುಗಿಯುವುದಿಲ್ಲ ಒಮ್ಮೆಗೆ

ಎಲ್ಲ ಮುಗಿಯುವುದಿಲ್ಲ ಒಮ್ಮೆಗೆ
ಅಂತ್ಯವೆಂಬುದು ತಾತ್ಕಾಲಿಕ
ಹಂಗಾಮಿ ಖುಷಿಯಂತೆ ನೋವೂ
ಹೊರಳಿ ಹೊರಳಿ ಬಾಳ ಕಥನ .
ಮುಂಬರುವ ಪುಟಗಳು ಕನಸು...

ಬೆರಳು ತಾಗಿಸಿಕೊಂಡ ನೆನಪು
ಕಂಬನಿಗೆ ಮಡಿಲಾದ ಹಾಳೆ
ಬಂದೇ ಬರುತಾವೆ ನಾಳೆ



ಎಲ್ಲ ಕೊನೆಗಳೂ ಕೊನೆಗಳಲ್ಲ
ಕೆಲವು ಮೊದಲುಗಳು, ಮಧ್ಯಂತರಗಳು
ತಿರುವುಗಳು, ಎಡವಿಸಿಕೊಂಡವುಗಳು
ಅವರವರ ಭಾವಕ್ಕೆ ಒಂದು ಹೆಸರು.
ಮೈಲಿಗಲ್ಲಿನ ಮೇಲೆ ಬರೆದ ಮಾತ್ರಕ್ಕೆ
ಊರು ಊರಾಗದು, ದೂರವೂ ಅಂತೆ
ಮಂಡಿ ಊರಿದೆಡೆ ನಿದ್ದೆ
ಪಾದ ತಾಕಿಸುವುದೇ ಪಯಣ



ಚಿತ್ತದಾಚೆ ಮೆತ್ತಗೆಯ ಹಾಸಿಗೊರಗಿ
ಗುಟ್ಟಾಗಿ ಸಜ್ಜುಗೊಂಡಂತೆ ಸುಣ್ಣ ಬಳಪ
ಕೊರೆದ ಒರಟು ಪಲಕದ ಹಣೆ ಮೇಲೆ
ಒಂದೊಂದಾಗಿ ತಿದ್ದುವ ಅಕ್ಷರಕೆ
ಅರ್ಥವೊದಗಿಸಲು ಜಡವಾಗಿರದೆ
ಚೂರಾದರೂ ಜರುಗಬೇಕು ಜೀವನ.
ಪಾತ್ರಗಳೆಲ್ಲ ಮುಂದುವರಿಯುತ್ತಾವೆ
ನನ್ನ ಪಾತ್ರ ಬೇರಾರೋ ನಿಭಾಯಿಸಿ ಬೀಗುತ್ತಾರೆ...



ಹಂಗು ತೊರೆವುದರಲ್ಲಿ ಸ್ವಾರ್ಥವಿದೆ,
ನೀಗಿದ ದಾಹಕ್ಕೆ ನೀರು ಭಾರವಾದಾಗ
ಕೆರೆ ಕಟ್ಟೆಗಳನ್ನ ಕೆಡವಿ ಬಿಡಬೇಕನಿಸಿ
ಇನ್ನೂ ದಣಿದಲ್ಲೇ ಉಳಿದವನ ಕಂಡು
ಮರುಕ ಪಟ್ಟವನಲ್ಲಿ ನಾನೂ ಒಬ್ಬ.
ಚೂರು ಜೋರಾಗಿ ಓಡಿ ಗೆಲ್ಲಬಹುದು
ಆದರೆ ಗೆದ್ದಾಗ ಯಾರೂ ಇರದೆ
ಸೋಲುವುದಕ್ಕಿಂತ ಸೋತು ಗೆದ್ದರೆ?



ಇರುಳಿಗೆ ದೀಪ ಬೆಳಗಿಸುವ ಮನ
ಗೋಡೆಯ ಚಿತ್ತಾರ ಛಾಯೆಯ ಬಳುಕಾಟ
ನರಳಾಟವೆಂದನಿಸುತ್ತಿಲ್ಲವಾದರೂ
ಒಮ್ಮೆ ತಲೆ ಸವರಿ ನೋಡಬೇಕು,
ಬಿಕ್ಕಿ ಅತ್ತರದಕೆ ಸಾಂತ್ವನ
ಅಥವ ನಟಿಸಿದ ಪಾತ್ರಕ್ಕೆ ಬಹುಮಾನ
ಏನಿಲ್ಲವೆಂದರೂ ಕತ್ತಲ ದಾಟಿದ ಯತ್ನಕ್ಕೆ
ಸಮರ್ಥನೆಗಳ ಸನ್ಮಾನ!

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...