Wednesday, 2 January 2019

ಚೂರು ನಿಲ್ಲು ಕಾಲವೇ

ಚೂರು ನಿಲ್ಲು ಕಾಲವೇ
ಏಕೆ ಇಷ್ಟು ಅವಸರ?
ನಿಂತು ಜಗವ ನೋಡಲು
ಇಲ್ಲವೇನು ಕಾತರ?

...
ನೀನು ಸುತ್ತಿ ಭೂಮಿಗೆ
ಇಷ್ಟು ದಣಿವು ತಂದೆಯಾ?
ಅಥವ ಭೂಮಿ ತಿರುವಿಗೆ
ವೇಗ ಕಂಡುಕೊಂಡೆಯಾ?



ಚುಚ್ಚು ಮದ್ದು ಸೂಜಿಯೂ
ನಿನ್ನ ಮುಳ್ಳಿನಂತೆಯೇ
ತಪ್ಪಿ ನಡೆದೆವೆಂದರೆ
ನೋವ ಕೊಡುವುದಲ್ಲಿಯೇ



ಆದರೀ ನೋವಲೂ
ಪಾಠ ನೂರು ಕಲಿತೆನು
ಆಗಲೆಂತು ಹೇಳು ನಾ
ನಿನಗೆ ತಕ್ಕ ಗೆಳೆಯನು?



ಬೇಡ ನಿನಗೆ ಆಣತಿ
ಬೇಡ ಯಾವ ಆಮಿಷ
ಕೀಲಿ ಕೊಟ್ಟು ಬಿಟ್ಟರೆ
ಅಷ್ಟೇ ನಿನಗೆ ಸಂತಸ



ಗೋಡೆಗಂಟಿಕೊಂಡಿರೋ
ದಾಡಿಯಿರದ ಸಂತ ನೀ
ಎಷ್ಟೇ ಕೆಟ್ಟ ಗಳಿಗೆಗೂ
ಜಾರಿ ಬಿಡದೆ ಕಂಬನಿ



ನಾನು ಮೈ ಮರೆತರೆ
ನೀಡಬೇಕು ಎಚ್ಚರ
ಸಮಯ ನೀನೇ ಮುಗಿಸಿದೆ
ನಿಲ್ಲಬೇಕು ಅಕ್ಷರ..

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...