Wednesday, 2 January 2019

ನಿನ್ನ ದನಿ ನನ್ನ ದನಿ

ನಿನ್ನ ದನಿ ನನ್ನ ದನಿ
ಏಕ ಮನ ಏಕ ಧಮನಿ
ನಿನ್ನ ಕುಲ ನನ್ನ ಕುಲ
ಪ್ರೇಮವಷ್ಟೇ ನಿರ್ಮಲ


ನಿನ್ನ ಅಳು ನನ್ನ ಅಳು
ಏಕ ಸ್ವರ ಏಕ ಮೌನ
ನಿನ್ನ ತುಮುಲ ನನ್ನದೂ
ಜೋಡಿ ಜೀವ ಬಂಧನ



ನಿನ್ನ ದಾರಿ ನನ್ನ ದಾರಿ
ಸೇರಿ ನಡೆವ ಆಟಕೆ
ನಿನ್ನ ಮೀರಿದೆಲ್ಲ ಸೇರಿ
ರದ್ದಿ ಕುಪ್ಪೆ ಜನ್ಮಕೆ



ನಿನ್ನ ಬಳಿ ನನ್ನ ಆಸೆ
ನನ್ನ ಮುಸಿ ಕೋಪವೂ
ಸಣ್ಣ ಗಾಳಿ ಸುಳಿಯದಷ್ಟು
ಜೋಡಿಸಿಟ್ಟ ಗಾಜಿದೋ
ನಾನು ನೀನು ಅನ್ನುವಷ್ಟು
ಅಂತರಕ್ಕೆ ಅಂಕವಿಲ್ಲ
ಅಂದವಾದ ಕವಿತೆ ನಿನ್ನ
ಸವಿದುಕೊಂಡೇ ಸವೆಯುವೆ



ನೀನು ನಾನು ಒಂದೇ ನೊಗ
ಬಾಳ ಬಂಡಿ ಕಟ್ಟುವ ಬಾ
ಏಳು ಬೀಳು ಎರಡಕ್ಕೂ
ನಾವೇ ಹೊಣೆಗಾರರು



ನೀನು ದೀಪ ಪ್ರೇಮ ರೂಪ
ಅಂತೆಯೇ ನಾ ನಿನಗೆ
ಹಾಡಿ ಮುಗಿಸೋ ವೇಳೆಗಲ್ಲಿ
ಸಿಹಿಯಾದ ಮಂಪರು

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...