Wednesday 2 January 2019

ಸಂಪಿಗೆಯ ಸಸಿಯೊಂದ

ಸಂಪಿಗೆಯ ಸಸಿಯೊಂದ
ನಿನ್ನ ಮನೆಯಂಗಳದಿ
ನೆಟ್ಟು ಹೋಗುವೆನಿಂದು
ಹಿಂದಿರುಗಿ ನೋಡದೆ
ಸ್ವಾರ್ಥವೇನಿಹುದಲ್ಲಿ...

ಮೊದಲ ಹೂ ಮುಡಿಗಿರಿಸು
ಕಂಪು ಉಸಿರಿಗೆ ಸೋಂಕಿ
ಎದೆ ಭಾರ ಕುಗ್ಗಲಿ



ನೂಲಿಂದ ಬೇರ್ಪಟ್ಟ
ಗಾಳಿಪಟದಂತೆ ಮನ
ಇಷ್ಟ ಬಂದಂತೆ ತೇಲುತ್ತ
ಸಾಗುತಲಿಹುದು
ತಡೆದೊಮ್ಮೆ ಹಿಡಿತದಲಿ
ಬಿಡದಂತೆ ಸೆಳೆದುಕೋ
ಕ್ರಮಿಸುವುದು ಬಚ್ಚಿಟ್ಟ
ಭಾವಗಳ ಸರಣಿಗೆ



ನಿನ್ನದೇ ಹಣತೆ
ನಿನ್ನದೇ ಬತ್ತಿ
ನೀನೇ ಎರೆದ ಎಣ್ಣೆಗೆ
ಹೊತ್ತಿದ ಕಿಡಿಯಷ್ಟು ನಾನು
ಉರಿವುದು ಧನ್ಯತೆಗೆ
ಕೊನೆಗುಳಿವೆ ಕಾಡಿಗೆಗೆ
ತೀಡು ಕಣ್ಣಿಗೆ ಬರಲಿ
ಇನ್ನಷ್ಟು ಬೆರಗು



ಸೆರಗಿನಂಚು ಬಂಧಿಖಾನೆ
ಬೆಳದಿಂಗಳಿಗೆ
ಮಳೆಬಿಲ್ಲೇ ಎರಗಿಹುದು
ಉಗುರು ಬಣ್ಣದ ಮೇಲೆ
ಎಲ್ಲ ಸುಳಿವುಗಳಲ್ಲೂ
ಪ್ರಶ್ನೆಯೊಂದನು ಇಡುವ
ನಿನ್ನ ಕಣ್ಣಿನ ಭಾಷೆಗಾವ
ನಿಘಂಟು?



ಊರಾಚೆ ಪೊದೆಗಳಿಗೆ
ಮೆದುಳು ಬಹಳ ಚುರುಕು
ಯಾರಿಗಾವುದು ಎಂದು
ಮೊದಲೇ ನಿಶ್ಚಯಗೊಂಡು
ಹಾದು ಹೋಗುವ ಸರದಿ
ಕೈ ಬೀಸಿ ಕರೆಯುವುದು
ನಾನಲ್ಲ ಕಿವಿಗೊಟ್ಟು
ವಶವಾಗೋ ಪೋಲಿ



ಮಳೆಗಾಲವೇ ಶೀತ
ಆದರೂ ಬೆವರಿಸುತ
ನಿದ್ದೆ ಕದ್ದ ಕುರುಹು
ಹಾಸಿಗೆಯ ತುಂಬ
ಕನಸೊಳಗೆ ಇಳಿಜಾರಿ
ತಳ ಮಟ್ಟ ನಲಿದವಳು
ಎದುರು ಬಂದರೆ ಮಾತ್ರ
ಮೌನ ಗೌರಿ!!

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...