Tuesday, 15 September 2015

ಪ್ರತಿವಾದ


ಪೋಲಿ ಕವಿತೆಯ ಗೇಲಿ ಮಾಡುವ
ಖಾಲಿ ತಲೆಯ ಓದುಗರೇ
ಬೇಲಿ ದಾಟದೆ ಉಳಿದುಕೊಂಡಿರಿ
ಈಚೆಗೆ ಬನ್ನಿ ಕಣ್ದೆರೆದು


ತಾಳಿ ಚೂರು ಟೀಕೆಗೂ ಮುನ್ನ
ತಿಳಿಸಿ ಬಿಡುವೆವು ಒಳ ಅರ್ಥ
ತಿದ್ದಿಕೊಳ್ವಿರಿ ನಿಮ್ಮ ಚಿಂತನೆ
ಆಗ ಒಂದೇ ಸರತಿಯಲಿ


ಸಹಜತೆಯಿಲ್ಲದ ಕವಿತೆಯು ವ್ಯರ್ಥ
ಅಂದವರು ಹಿಂದೆ ನೀವು
ಆಸಹಜತೆಯ ಮೊರೆ ಹೋಗದೆ ಅದಕೇ
ನೇರ ಮಂಡಿಸಿದೆವು ವಿಷಯ


ಹಿರಿಯರು ನೀವು ಹಿರಿತನವಿರಲಿ
ಕಿರಿಯರ ಕಿವಿ ಹಿಂಡಿರಿ ತಿದ್ದಿ
ಆದರೆ ಸಹನೆಗೂ ಸೀಮೆ ಉಂಟು
ಮೀರುವ ಯತ್ನ ಮಾಡದಿರಿ


ವಿಚಲಿತಗೊಳಿಸುವ ಬಾಣಗಳುಂಟು
ಅಂತೆಯೇ ಕದಲಿಸುವವು ಕೂಡ
ಎಲ್ಲಿ ಯಾವುದು ನಾಟುವ ಋಣವೋ
ನಿಶ್ಚಯಿಸುವುದಕೆ ನಾವ್ಯಾರು?


ಹೋಗಲಿ ಬಿಡಿ, ಮನ ಘಾಸಿಸಿಕೊಳದಿರಿ
ಸಿಟ್ಟಿಗೆ ಎಲ್ಲಿದೆ ಕಡಿವಾಣ
ಮಡಿಯನು ಬಿಟ್ಟು, ಒಟ್ಟಿಗೆ ಕೂತು
ಪೋಲಿ ಕವಿತೆಯ ಕಟ್ಟೋಣ!!


                                        -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...