ಇಳಿಸಂಜೆಯ ಮಳೆ
ಹನಿ ಹನಿ ಹನಿ ಹನಿ ಜಾರುತಿವೆ
ಇಳೆಯ ಎದೆ ಕದ
ಬಡಿಯುತ ಚಿಟ ಪಟ ಸುರಿಯುತಿದೆ
ಒಲವೆಂಬುದು ಮಾಯಾ ಮಳೆಯಂತೆ
ಬಂದಂತೆ ಬಂದು ಮರೆಯಾಗಿ
ಮತ್ತೆಲ್ಲೋ ಸಿಗುವ ಮೋಡದಲಿ
ತಣಿಸುವುದು ಮನಸನ್ನು, ಮರೆಸುವುದು ಜಗವನ್ನು ...
ಕೊಡೆಗಳ ಮೇಲೆ ಹನಿಗಳ ಕುಣಿತ
ಮುತ್ತಿನ ಸ್ವಗತಗಳು
ಇಳಿಮುಖವಾದರೂ ಒಳಗೊಳಗಿನ್ನೂ
ತೊಡಗಿದ ಭಾವಗಳು
ಕಾಮನಬಿಲ್ಲು ಮೂಡುವ ಹಾಗೆ
ನಗೆ ಮೂಡಿತು ಸಹಜ
ಒಲವಿನ ಗೀತೆ ಬರೆಯಲು ಸುಲಭ
ಮಳೆಯೆಂಬುದೇ ಕಣಜ
ಆರಿಸುತ ಪೋಣಿಸುವೆ ಬೇಕೆಂದ ಹನಿಗಳ
ಹಾಡುತಲಿ ಮೈ ಮರೆಯೋ ಮಾರ್ಗವಿದು ಅತಿ ಸರಳ
ಇಳಿಸಂಜೆಯ ಮಳೆ
ಹನಿ ಹನಿ ಹನಿ ಹನಿ ಜಾರುತಿವೆ
ಇಳೆಯ ಎದೆ ಕದ
ಬಡಿಯುತ ಚಿಟ ಪಟ ಸುರಿಯುತಿದೆ
ಕರೆವಾಗ ಬಾರದು ಮಳೆಗಾಲ
ಬಂದಾಗ ನಿಲ್ಲದು ಬೇಡಿಕೆಗೆ
ಅನುರಾಗವೂ ಹೀಗೆಯೇ ಅನುಗಾಲ
ತಣಿಸುವುದು ಮನಸನ್ನು,
ಮರೆಸುವುದು
ಜಗವನ್ನು ...
ಹಸಿ ನೆಲವೊಂದು ಹಾಳೆಯ ಹಾಗೆ
ಹಸಿರಿಗೆ ಕವಿ ಮನಸು
ರಸನಿಮಿಷಗಳ ಹೊಸದಾಗಿಸಲು
ಮುಗಿಲ ಅನುಕರಿಸು
ಇರುವೆಯ ಸಾಲು ಬಿಡಿಸಿದ ಗೆರೆಯ
ದಾಟಲೂ ಅಪ್ಪಣೆಯೇ?
ಗರಿ ಒದರುತಲಿ ಉದುರುವ ಹನಿಯು
ಮಳೆಗೆ ಟಿಪ್ಪಣಿಯೇ!
ನಿಂತರೂ ತಾ ನಿಲ್ಲದಿದೆ ಎದೆಯ ಒಳಮಳೆ
ನೆನಪುಗಳು ಭೋರ್ಗರೆದು ನೆನೆಸುತಿವೆ ಈ ವೇಳೆ...
No comments:
Post a Comment