Wednesday, 18 September 2013

ಇವಳಾ ನನ್ನವಳು ?!!

ಇವಳಾ!! ಚಂದಿರನ ತಂಗಿ 
ಇವಳಾ!! ಬಾಂದಳದ ಹೆಣ್ಣು 
ಇವಳಾ!! ನಾ ಬರೆಯೋ ಕವಿತೆ 
ಇವಳಾ!! ಎಲೆಮರೆಯ ಹಣ್ಣು 
ಇವಳಾ!! ಸಕ್ಕರೆಯ ಅಚ್ಚು 
ಇವಳಾ!! ಒಲವೆಂಬ ಕಿಚ್ಚು 
ಇವಳಾ!! ಮನೆ ದಾರಿ-ದೀಪ 
ಇವಳಾ!! ಕನವರಿಕೆ ರೂಪ
ಇವಳಾ... ಇವಳಾ... ಇವಳಾ.... ???                     [೧]


ಕನ್ನಡಿಯ ಚೂರಿಗೆ ಜೀವದಾನ 
ಬಣ್ಣಿಸುವ ಮಾತಿಗೆ ಮಧ್ಯಪಾನ 
ಹಂಬಲದ ಹಾಡಿಗೆ ಸಿಹಿಯ ಜೇನಾ?
ಅಚ್ಚರಿಯ ಬೀರಿದೆ ಕಾಲಮಾನ 

ಓಡುವ ಮುಳ್ಳನು ತಡೆಯುವಳು 
ಬಾಡುವ ಹೂವಿಗೆ ಮಿಡಿಯುವಳು 
ಮಾತಿಗೆ ಕರಗುತ ಹರಿಯುವಳು 
ಆಸೆಯ ಸೂರಡಿ ಸಿರಿಯಿವಳು                               [೨]


ಹೆಜ್ಜೆಯಡಿ ಹುಲ್ಲಿಗೆ ಹಬ್ಬವಂತೆ 
ಸ್ವರಗಳ ಹಿಂದಿನ ಶಬ್ಧದಂತೆ 
ಬೆಚ್ಚುವಳು ಅಂಜುವ ಮಲ್ಲೆಯಂತೆ 
ತೋಚುವಳು ನಾಳೆಯ ತಾಯಿಯಂತೆ 

ದಾಹವ ತಣಿಸುವ ನದಿಯಿವಳು 
ಮೌನವ ಗೆಲ್ಲಿಸೋ ಗುಣದವಳು 
ಮುಟ್ಟಲು ಕರಗುವ ಹಿಮ ಇವಳು 
ಬರೆಯಲು ನಿಲ್ಲದ ಕಥೆಯಿವಳು                                [೩]

                       
                                       --ರತ್ನಸುತ 

1 comment:

  1. ಅಂದಹಾಗೆ, ಬಲು ಬೇಗ ನೀವು ಸಲ್ಲಿಸಿರುವ requirement ಪಟ್ಟಿ ಅನುಸಾರ ನಲ್ಲೇ ಪ್ರಾಪ್ತಿಯಾಗಲಿ ಎಂದು ನಾನು ರತಿ - ಮನ್ಮಥರಲ್ಲಿ ಬೇಡಿಕೊಳ್ಳುತ್ತೇನೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...