ಎಲ್ಲದಕ್ಕೂ ಕೊನೆಯಿದೆ
ದಾರಿಗೆ, ಗುರಿಗೆ,
ಸೋಲಿಗೆ, ಗೆಲುವಿಗೆ
ನೋಟಕೆ, ಆಟಕೆ
ಸೃಷ್ಟಿಗೆ, ಸಾವಿಗೆ
ಉಸಿರಿಗೆ, ಹೆಸರಿಗೆ
ಸಮಸ್ತ ಮಸ್ತಕಕ್ಕೂ
ಹೆಸರಿಡುವ ತವಕ
ತಡೆಯೊಡ್ಡುವ ಗೋಡೆ
ಮುರಿವುದೋ, ಹಾರುವುದೋ
ಗೊಂದಲವೆಬ್ಬಿಸುತಿದೆ.
ಈಚೆ ಮರುಭೂಮಿ
ಆಚೆ ಮೊಸಳೆ ಕೊಳ
ನಡುವೆ ನನ್ನನು ನಾನೇ
ಅಜೀರ್ಣ ನಿಂದನೆಯ
ಹಾವಳಿಗೆ ದೂಡಿರುವೆ
ಕತ್ತಲ ವೀಕ್ಷಣೆಗೆ
ಬೆಳಕಿನ ಬಲಿದಾನ
ಸುಡು ಕಂಪನಕೆ
ಕಂಬನಿಗಳ ಅನುದಾನ
ನೆನ್ನೆಗಳು ಸುಳ್ಳು
ನಾಳೆಗಳು ಒಗಟು
ಇಂದಿನ ಈ ದಿನವೇ
ಬಾಡಿದ ತೊಗಟು
ಮೂಲವನು ಮರೆತರೆ
ನಿರ್ಮೂಲವಾಗುವೆ
ಕಾಲಾನುಸಾರಕ್ಕೆ
ತೆವಳುತ್ತ ಸಾಗಿ ಬಂದು
ತಲುಪಿದೆಡೆಗೆ ಹೆಸರಿಡಬೇಡವೇ ?
ಇಲ್ಲವೇ ಸುಮ್ಮನಿರೋಣವೇ ?
ನಿರ್ಧರಿಸುವವಷ್ಟರಲಿ, ಇಂದು
ನೆನ್ನೆಯ ಸುಳ್ಳು
ನಾಳೆ ಇಂದಿನ ಒಗಟು
ಹೊರುವವರಿಲ್ಲದ ಚಟ್ಟ
ಅಳುವವರಿಲ್ಲದ ಸಾವು
ನೊಣಗಳೂ ಮೂಸದ
ದಾರಿದ್ರ್ಯ ದೇಹ
ಒಡಲ ತೊರೆಯದ ಶಾಖ
ಮತ್ತೆ ಮುನಿಸು ಬಿಟ್ಟ ಉಸಿರು
ಮತ್ತೊಂದು ಚಿಗುರು
ಮತ್ತೊಂದು ಬದುಕು
ಸದ್ಯದ ಪ್ರಶ್ನೆ
"ಹುಡುಕಲೆಂತೋ ಉತ್ತರವ?"
ಇನ್ನೆಲ್ಲಿ ಉತ್ತರ
ತಾ ಪ್ರಶ್ನಾರ್ಥಕವಾಗಿರಲು
ನಾನೂ ಇರುವೆ
ತಡೆ ಗೋಡೆಯೂ ಇದೆ
ಈಚೆ ಮರುಭೂಮಿ
ಆಚೆ ಮೊಸಳೆ ಕೊಳ.......
--ರತ್ನಸುತ
No comments:
Post a Comment