Tuesday, 24 December 2013

ಅವಳ ವ್ಯಾನಿಟಿ ಬ್ಯಾಗಲ್ಲಿ !!

ಮರೆತಂತೆ ಆಕೆ ಬಿಟ್ಟು ಹೋಗಿರುವಳು 
ಎದೆಯಲ್ಲಿ ಅವಳ ವ್ಯಾನಿಟಿ ಬ್ಯಾಗ
ಇಡಿ ಆವರಣ ಬಟಾ ಬಯಲಾಗಿದ್ದೂ 
ಅದ ಮಾತ್ರ ಇಡಲು ಇಲ್ಲದ ಜಾಗ 
 
ಒಪ್ಪದ ಮನಸಲ್ಲಿ ಮುಂದುವರೆದೆ
ತಡೆದಂತೆ ತೆರೆದು ನೋಡುವ ಸಲುವೆ 
ಕಿಸೆಯೊಳಗೆ ಕಿಸೆ, ಒಳಗೆ ಮತ್ತೊಂದು ಕಿಸೆ
ಕಳೆದು ಹೋಗಿದ್ದೆ ನಾ ಗುಟ್ಟುಗಳ ನಡುವೆ  
 
ಏನೂ ಬರೆಯದ ಖಾಲಿ ಚೀಟಿಯೊಂದು 
ಶಾಯಿ ಮುಗಿದ ಹಸಿದ ಲೇಖನಿ 
ಸುಕ್ಕು ಹಿಡಿದ ಒಂದು ಕರವಸ್ತ್ರದಂಚಲಿ 
ಇಂಗದೆ ಉಳಿದಿತ್ತು ಕಣ್ಣ ಹನಿ 
 
ಅಧರ ಲೇಪದ ಕಡ್ಡಿ, ಕಣ್ಗಾಡಿಗೆ 
ಅಂಟಿನಂಟಿರದಿತ್ತು ಹಣೆ ಬಿಂದಿಗೆ 
ಬಾಚಣಿಕೆ ಹಲ್ಲಿಗೆ ಪುಡಿಗೂದಲು
ಬೈತಲೆ ಬೋಟ್ಟಿಗೆ ಅದು ಕಾವಲು 
 
ಕಳೆದ ಜೋಡಿಗೆ ಒಂಟಿಯಾದ ಜುಮುಕಿ
ನಕಲಿ ಗೆಜ್ಜೆ, ಅಸಲಿ ಸದ್ದ ಗಿಲಕಿ 
ಗೋರಂಟಿ, ನಡು ನೆರಿಗೆಯ ಹಿಡಿ ಪಿನ್ನು 
ಸಾಕು ಬಿಡಿ ಹೇಳಲಾರೆ ಮೆತ್ತಿನ್ನೇನು !!
 
                                    -- ರತ್ನಸುತ

1 comment:

  1. ಒಂದು ಕಾಲದಲ್ಲಿ ಯಾರದೋ ವ್ಯಾನಿಟಿ ಬ್ಯಾಗು ಚೆಕ್ ಮಾಡಿದ್ದೆ... ಈಗ ನೆನಪಾಯ್ತು!

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...