Monday, 30 December 2013

ಚೆಲುವೆ ನೀನು ನಕ್ಕರೆ !!

ನೀ ಹಿಂದಿರುಗಿ ನಕ್ಕಾಗ
ಜಾರಿದ ಮನಸುಗಳ
ಲೆಕ್ಕ ಹಾಕುತ್ತಾ ಹೋದರೆ
ಕೈ ಬೆರಳು ಸಾಲದಾಗಿ
ತಲೆ ಕೆಟ್ಟು ಹುಚ್ಚನಾಗುತ್ತೇನೆ !!
ನೆಪ ಮಾತ್ರಕೆ ಈ ದೂರು,
ಆದರೆ ಒಳಗೊಳಗೇ ನಕ್ಕು
ಖುಷಿ ಪಡುತ್ತೇನೆ

ನಿನ್ನಾಸರೆ ಪಡೆದ ಕನಸುಗಳು
ಈಗಲೂ ಬೆಚ್ಚಗಿವೆ
ಎದೆಯ ಗುಡಾಣದಲ್ಲಿ.
ಮರಿ ಹಾಕುವ
ನವಿಲು ಗರಿಗಳಿಗೆ
ಉಚಿತ ಕಾವು ಕೊಟ್ಟು
ಮೊಳೆಯುವ ಆಸೆಗಳಿಗೆ
ಖಚಿತ ಸ್ಥಾನವಿಟ್ಟು

ನನ್ನುಸಿರ ಮಾರ್ದನಿಯಾಗಿ
ನಿನ್ನ ಪಿಸುಗುಟ್ಟು
ವಿನಾಕಾರಣ ಮಾತು ತೊದಲುವುದು
ಆಡುವುದ ಬಿಟ್ಟು
ನೀ ಹಿಗ್ಗಿದರೆ, ನನಗಲ್ಲಿ ಸಿಗ್ಗು
ಬಿಕ್ಕಲು ನಾ ತಬ್ಬಿಬ್ಬು
ನಿನ್ನ ಕಣ್ಣೀರಿಗೆ ಧಾವಿಸುವ
ನನ್ನೀ ಭುಜವೇ ಜವಾಬು

ಕ್ಷಣ-ಕ್ಷಣಕ್ಕೂ
ಹೊಸ ರೂಪ ತಾಳುವ ನೀನು
ಒಮ್ಮೆ, ಒಗಟಿನ ಸುಳುವಾದರೆ
ಮತ್ತೊಮ್ಮೆ, ಒಗಟಿಗೇ ಒಗಟು
ನನ್ನ ಮನದ ಬೋಳು ಮರ-
ಬಿಟ್ಟ ಪ್ರೇಮ ಫಲಕೆ
ನಿನ್ನೊಲುಮೆಯೇ ರಕ್ಷೆ ನೀಡಬಲ್ಲ
ತೊಗಟು

ಇಗೋ ಸಾಲು-ಸಾಲು
ನಿನ್ಹೆಸರಲಿ ಪೋಳಾದ ಅಕ್ಷರ
ಈ ನಡುವೆ ಹೀಗೇ
ಸಮಯದ ಪಾಲಿಗೆ ನಾ ಬಕಾಸುರ 
ಮತ್ತೊಮ್ಮೆ ನಕ್ಕ ನಿನಗೆ 
ಮತ್ತೊಂದು ಕಾವ್ಯದರ್ಪಣೆ 
ಈ ಬಾರಿ ಚೂರು 
ಭಾರಿ ಪ್ರಮಾಣದ ನಿವೇದನೆ 
                 
                   -- ರತ್ನಸುತ 

1 comment:

  1. 'ನನ್ನೀ ಭುಜವೇ ಜವಾಬು' ಎಂದರೆ ಸಾಕಲ್ಲವೇ, ಆಕೆಗೂ ನಂಬಿಕೆ ಕುದುರೀತು ಬೇಗನೆ!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...