Tuesday, 3 December 2013

ಜೂಲಿ, ಮತ್ತವಳ ಜೋಡಿ !!

ನಿನಗೆಲ್ಲೋ ಲಜ್ಜೆ?
ತೂಕಡಿಕೆ ತಿಮ್ಮ!
ಮಂಪರಲೇ ಮೈ ಮರೆತು 
ದಿನಗಳೆದೆಯಲ್ಲ!
ಈಗ ಕಣ್ಣುಜ್ಜಿ ಏನು ಬಂತು?
ನಿನ್ನ ನಂಬಿ ಹೋದೆ ಸೋತು.  
ಕೊಂದು ಬಿಟ್ಟೆ ವಿಶ್ವಾಸವ 
ಪರಮ ದ್ರೋಹಿ !!
 
ಎಲ್ಲೋ ಬೀದಿಯಲಿ ಸಿಕ್ಕೆ 
ಅನಾಥನಾಗಿ 
ಯಾರೂ ಮೂಸಿ ನೋಡಿದವರಲ್ಲ 
ನಿನ್ನ 
ಒಲ್ಲದ ಮನಸಿಂದ ಎತ್ತಿ 
ವಿರೋಧಗಳ ನಡುವೆ 
ಮನೆಗೆ ತಂದುಕೊಂಡೆ 
ಇನ್ನು ನೀನು, ಛೇ!!
 
ಕುದಿಸಿದ ಘಟ್ಟಿ ಹಾಲೇ 
ಎರೆದದ್ದು ನಿನಗೆ 
ತಿಂಡಿ ಡಬ್ಬಿಯ ಬಿಸ್ಕತ್ತು, ಬ್ರೆಡ್ಡು
ಮೂಳೆ, ಮಾಂಸ ವಾರಕ್ಕೊಮ್ಮೆ 
ನಿನಗಾಗಿ ಕಟ್ಟಿದೆ 
ಒಂದು ಪುಟ್ಟ ಗೂಡು 
ಕಟ್ಟುವ ಬರದಲ್ಲಿ 
ಹೊಸ ಜೀನ್ಸು ಹರಿದುಕೊಂಡೆ 
 
ನನ್ನ ಅವಸರವನ್ನೂ ಲೆಕ್ಕಿಸದೆ 
ನಿನ್ನ ಅವಸರಕ್ಕೆ ಧಾವಿಸಿದೆ 
ಬೀದಿ-ಬೀದಿ ಸುತ್ತಿ 
ನಿನ್ನ ಹಿಂದೆ ಅಲೆದೆ 
ನಿಂತಲ್ಲಿ ನಿಂತೆ 
ಹೋದಲ್ಲಿ ಎಚ್ಚರ ವಹಿಸಿದೆ
ಯಾರೂ ನೋಡದಂತೆ 
ನಿನ್ನ ಮಾನ ಕಾದೆ 
 
ಆ ಮೂರನೇ ಬೀದಿಯಲ್ಲೇ 
ನಾಲ್ಕಾರು ಬಾರಿ ಸುತ್ತಿಸಿ 
ನಿನ್ನ ಕಣ್ತಂಪು ಮಾಡಿಕೊಂಡೆ 
ಜೂಲಿಯ ಕೆಕ್ಕರಿಸಿ 
ತಡೆದೆನೇ? ಪ್ರಶ್ನಿಸಿದೆನೇ?
ನಿನ್ನ ಪಾಡಿಗೆ ಬಿಟ್ಟೆನಲ್ಲ?
ಬೆಂದ ಬೇಳೆಯ 
ಮತ್ತಷ್ಟು ಬೇಯಿಸಿಕೊಳ್ಳಲಿಕ್ಕೆ 

ಇನ್ನು ನನ್ನದೊಂದು ಕೋರಿಕೆ 
ಅಸಾಧ್ಯವೇನಾಗಿರಲಿಲ್ಲ, 
ಸಂದೇಶದೊಟ್ಟಿಗೆ ಹೂ-
-ಬುಟ್ಟಿಯ ನನ್ನವಳಿಗೆ ತಲುಪಿಸ ಬೇಕಿತ್ತು 
ಆದರೆ ನೀನು, 
ನಡುದಾರಿಯಲ್ಲಿ ಜೂಲಿ ಕಂಡಳೆಂದು 
ಎಲ್ಲ ಮರೆತೆಯಲ್ಲ?
ಈಗ ಕೆಲಸ ಕೆಟ್ಟಿತಲ್ಲ!!

ಜೂಲಿಯ ಒಡತಿ ನನ್ನವಳು 
ನಿನ್ನಂತೆ ನಾನೂ ಅಂದುಕೊಳ್ಳುವಳು 
ಮುಖ ತೋರಿಸಲಿ ಹೇಗೆ?
ಮಾತನಾಡಿಸಲಿ ಹೇಗೆ?
ಎಲ್ಲವೂ ಎಡವಟ್ಟಾಯಿತು
ನಿನ್ನಿಂದ 
ಮೆಚ್ಚುಗೆ ಗಳಿಸಬೇಕು ಈಗ 
ಮೊದಲಿಂದ ...... :((

                         -- ರತ್ನಸುತ 

1 comment:

  1. ಇದನ್ನೇ ಭರತಮುನಿಗಳೇ ನಾಯಿ ಪಾಡು ಎನ್ನುವುದು! ನಾನು ಹಾಸ್ಟೆಲಿನಲ್ಲಿ ಇದ್ದಾಗ ಪಕ್ಕದ ಮನೆಯಲ್ಲಿ ಇದ್ದ ಯಮುನ ಜೊತೆಗವಳ ಕಂತ್ರೀ ನಾಯಿ ನೆನಪಾದವು!!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...