ಸೆಳೆದ ನಿನ್ನ ಕಣ್ಣ ಕುರಿತು
ಬರೆದು ಅತೃಪ್ತಿಯಿಂದ ಬಿಸಾಡಿದ ಕಾಗದಗಳೆಲ್ಲ
ತಿಪ್ಪೆಯ ರಸಗೊಬ್ಬರವನ್ನು ಶ್ರೀಮಂತವಾಗಿಸಿದವು;
ಅದ ಫಲಿಸಿಕೊಂಡ ಬಳ್ಳಿಯ ಒಂದು ಹೂವು
ನಿನ್ನ ಮುಡಿಯೇರದಿದ್ದರೆ
ಪ್ರೇಮ ಕೃಷಿ ಪರಿಪೂರ್ಣವಲ್ಲ!!
ಮೊರದಲ್ಲಿ ಹಸನಾದ ದವಸದ ಕಾಳಿಗೆ
ನೀ ಕೊಟ್ಟ ಗಾಜಿನ ಬಳೆಗಳ ಪರಿಚಯಕೆ
ಮೊಳಕೆಯೊಡೆದರೆ ಅದಕೆ ನೀನೇ ಹೊಣೆ;
ಬರಗಾಲದ ಬಯಲು ಹಸಿಯಾದರೆ
ದವಸಕ್ಕೆ ಹಂಬಲಿಸಿ ಸಸಿಯಾದರೆ
ಬಾಗೀನ ಪಡೆಯಲು ಸೀರೆಯುಟ್ಟು ಬಾ!!
ಒಲೆ ಮೇಲೆ ಇರಿಸಿದ ಹಾಲು
ಕಿಚ್ಚು ಹೊತ್ತಿಸುವಂಥ ನಿನ್ನ ನಗೆಯಿಂದ
ಉಕ್ಕಿ ಚೆಲ್ಲಾಡಿದೆ ಕೋಣೆಯ ತುಂಬ;
ಸಾರಿಸಿದ ಒಲೆ ಮೇಲೆ ರಂಗವಲ್ಲಿ
ನೀ ಮೂಡಿಸಿದ್ದು ಸುಳ್ಳು ಅನ್ನದಿರು ಪಾಪ
ಮಸಿಭರಿತ ಉಸಿರಾಟ ನಿಲ್ಲಬಹುದು!!
ಕಣಜದ ಕೋಣೆಯಲಿ ನೀ ಬಡಿಸಿ ಬಂದ
ಗೆಜ್ಜೆಯ ಸದ್ದಿಗೆ ಕಿವಿಯಾದ ಗೋಡೆಗಳು
ಜೀವಂತವಾಗಿವೆ ಮತ್ತೆ, ಮತ್ತೆ
ಅದನೇ ಪ್ರತಿಧ್ವನಿಸಿಕೊಂಡು;
ಎಣ್ಣೆ ತೀರಿದ ಹಣತೆ ಉರಿದು ಬೀಳುತಿದೆ
ನಿನ್ನ ತಾ ನೋಡಲಾಗದ ದೌರ್ಭಾಗ್ಯಕೆ!!
ಗೋಡೆಗೆ ಜೋತು ಏಕ ಚಿತ್ತನಾಗಿ
ನಿನ್ನ ಚಲನ-ವಲನ ಗಮನಿಸುತಲೇ
ಉನ್ಮತ್ತನಾದ ನೇಗಿಲು
ಜೋಡಿ ಎತ್ತುಗಳಿಗೆ ನಿನ್ನ ಬಣ್ಣನೆ ಒಪ್ಪಿಸಿ ಹೂಳುವಾಗ
ನೀ ತಂದ ತಂಬಿಗೆಯ
ಮಜ್ಜಿಗೆಯ ಗುಟುಕಲ್ಲಿ ನಿರಾಯಾಸ ನನಗೆ
ಧನ್ಯತೆ ನೀ ಮೆಟ್ಟಿ ನೇಗಿಲ ಗೆರೆಗೆ!!
ಕುರಿ ಕಂಬಳಿಯ ಮೆಲೆ
ನೀ ಕಂಡ ಕನಸುಗಳ ಸಾಕ್ಷಿಗೆ
ಬತ್ತದ ತಲೆದಿಂಬು;
ಹೊದ್ದ ಚಾದರ ಎಲ್ಲವ ಎಣಿಸಿ
ಲೆಕ್ಕ ಒದಗಿಸಿತೆನಗೆ
ರೆಪ್ಪೆ ಕಾವಲ ನಡುವೆ
ನನ್ನ ಕಣ್ತುಂಬೋ ಗಳಿಗೆ!!
-- ರತ್ನಸುತ
No comments:
Post a Comment