Sunday, 23 November 2014

ಸೂತಕದಲ್ಲೇ ಅರಳಿದ ಕವನ

ಪಟ್ಟು ಹಿಡಿದು ಕೂತೆ 
ಚಟ್ಟವೇರಿ ಬಂದ ಸಾಲು 
ಥಟ್ಟನೆ ಎದುರಾಗದೆ 
ಆ ಬೀದಿ, ಈ ಬೀದಿ ಸುತ್ತಾಡಿ 
ಕೊನೆಗೆ ನನ್ನ ಮನದ ಸ್ಮಶಾಣದಲ್ಲಿ 
ಮಣ್ಣಾಗಲು ಬಂದೇ ಬಿಟ್ಟಿತು!!

ಇನ್ನೂ ಜೀವಂತವಾಗಿದೆ ಸಾಲು 
ಕವಿತೆಯ ಚಟ್ಟ ಅದನ್ನು ಕಟ್ಟಿಹಾಕಿದೆ 
ಉಸಿರಾಡದಂತೆ ಒತ್ತಾಯಪೂರ್ವಕವಾಗಿ;
ಕಣ್ಣೀರ ಪಸೆ ಬಯಲಾಗಿ 
ಮಣ್ಣಾಗಿಸಲು ಮನಸಾಗಿಲ್ಲ
ಆದರೂ ಕಾರ್ಯನಿಷ್ಠೆಯ ಪಾಲಿಸಿ 
ಗುಂಡಿಯ ಮುಚ್ಚಿಬಿಟ್ಟೆ!!

ಚಟ್ಟದ ಅಲಂಕಾರಗಳನ್ನ 
ಗೋರಿಗೆ ಪರಿಚಯಿಸಿ
ಗಂಧ ಮೆತ್ತಿದ ಬಿದಿರ ಕಾಲು ಮುರಿದು 
ಮಕಾಡೆ ಮಲಗಿಸಿದೆ;
ಒಳಗೆ ಸಾಲು ಸಾಲ ಹಡೆದು 
ಮಣ್ಣಿಂದಾಚೆ ಮೊಳೆದು
ಗೋರಿಯ ನಿಲುವುಗಲ್ಲಿಗೆ 
ಹಬ್ಬಿ ಮುದ್ದಾಡಿತು!!

ಕವಿತೆ ಅಂದರೆ ಅನುಭವ 
ಕಲ್ಲಿಗೆ ಆಗಿದ್ದೂ ಅದೇ;
ತಾನು ವಾಚಿಸುತ್ತಿದ್ದ ಕವಿತೆಯನ್ನ 
ಆಲಿಸುತ್ತಲೇ ಬಳ್ಳಿ ಬಿಗಿಯಾಗಿ 
ಕಲ್ಲೂ ಕರಗಿತು 
ಅಲ್ಲಿದ್ದ ಗೋರಿಯೂ ಸಮತಟ್ಟಾಗಿ 
ಇಲ್ಲವಾಯಿತು!!

ಮನಸಿಗೆ ಅಂಟಿದ್ದ ಸೂತಕ 
ಬಿಟ್ಟುಕೊಳ್ಳುತ್ತಲೇ 
ಮತ್ತೆಲ್ಲೋ ಸೂತಕದ ಛಾಯೆ;
ಬೆರಳನ್ನೂ ಬೆಪ್ಪಾಗಿಸಿ 
ಹಾಳೆಗೆ ವರ್ಗಾವಣೆಯಾದಾಗಲಷ್ಟೇ 
ಮನಸು ಹಗುರಾಗಿದ್ದು!!

                             -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...